ಬೆಂಗಳೂರು:ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳೀಪಟ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿಂದು ಸವಾಲು ಹಾಕಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಇವತ್ತಿನವರೆಗೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದರು ಇವರು.
ಬಿಜೆಪಿಗೆ ಪ್ರತಿಪಕ್ಷ ಸ್ಥಾನ
ಇನ್ನು ರಾಷ್ಟ್ರಮಟ್ಟದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿಂದಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದೆ, ಮುಂದಿನ ಚುನಾವಣೆಯಲ್ಲಿ ಆ ಪಕ್ಷವನ್ನು ಪ್ರತಿಪಕ್ಷದ ಸ್ಥಾನದಲ್ಲಿ ನೋಡುತ್ತೀರಿ ಎಂದು ಭವಿಷ್ಯ ನುಡಿದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ ಅವರು, ಇಂದು ಗ್ಯಾರಂಟಿಯನ್ನೇ ಪುನಃ ಪುನಃ ಪ್ರಸ್ತಾಪಿಸಿದ್ದಲ್ಲದೆ, ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದರೆ, ಬಿಜೆಪಿಗೆ ಜನರು ಆಶೀರ್ವಾದವೇ ಮಾಡಿಲ್ಲ.
ಇಂತಹವರು ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿ ಆಗಿದೆ, ದಿವಾಳಿ ಆಗಿದೆ ಎಂದು ಟೀಕಿಸುತ್ತಾರೆ.
ಬಿಜೆಪಿ ಪ್ರಣಾಳಿಕೆ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮೋದಿಕೀ ಗ್ಯಾರಂಟಿ ಎಂದು ಘೋಷಿಸಿದರು.
ಗ್ಯಾರಂಟಿಗಳನ್ನು ವಿರೋಧಿಸಿದ ಬಿಜೆಪಿಯವರು, ಚುನಾವಣೆಯನ್ನು ಎದುರಿಸಿ, ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಸ್ಥಾನ ಪಡೆದರು.
ಗ್ಯಾರಂಟಿ ಯೋಜನೆಯಿಂದ ರಾಜ್ಯ ಬೊಕ್ಕಸ ಬರಿದಾಗಿಲ್ಲ, ನಾವು ಎಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೋ ಅಲ್ಲಿ ಕೈಗೊಂಡಿದ್ದೇವೆ, ಇವರ ಕಣ್ಣಿಗೆ ಅದ್ಯಾವುದೂ ಕಾಣಿಸುವುದಿಲ್ಲ.
ನೋಟ್ ಪ್ರಿಂಟ್ ಮಿಷನ್ ಇಲ್ಲ
ರೈತರ ಸಾಲ ಮನ್ನಾ ಮಾಡಿ ಎಂದರೆ, ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದರು, ಆದರೆ, ಇದೇ ಬಿಜೆಪಿ ಅದಾನಿ, ಅಂಬಾನಿಯ ಸಾಲ ಮನ್ನಾ ಮಾಡಿದರು.
ಇದೀಗ ನಮ್ಮ ಸರ್ಕಾರದ ಯೋಜನೆಗಳಿಗೆ ಮತದಾರರು ಸ್ಪಂದಿಸುತ್ತಿದ್ದಂತೆ ಪ್ರತಿಪಕ್ಷಗಳು ಇಲ್ಲದ ಟೀಕೆ ಮಾಡಿ, ಸರ್ಕಾರದ ಅಭಿವೃದ್ಧಿಯನ್ನು ಮರೆ ಮಾಚುತ್ತಿದ್ದಾರೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳಿಗೆ ಸರಿ ದಾರಿ ತೋರಲು ಟೀಕೆಗಳು ಇರಬೇಕು, ಆದರೆ, ಸತ್ಯವನ್ನು ಮರೆ ಮಾಚಿ ಟೀಕೆ ಮಾಡಬಾರದು, ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ ಎಂದರು.
ದಾಖಲಾತಿ ಇಡಬೇಕು
ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಬೇಕು, ದಾಖಲಾತಿಗಳನ್ನು ಸದನದ ಮುಂದಿಡಬೇಕು, ಇದನ್ನು ನಾನು ಎಂದಿಗೂ ಸ್ವಾಗತಿಸುತ್ತೇನೆ.
ರಾಜ್ಯದ ಜನತೆ ನನ್ನ ಸರ್ಕಾರವನ್ನು ಒಪ್ಪಿಕೊಂಡಿದ್ದಾರೆ, ಅವರ ಆಶೋತ್ತರಗಳನ್ನು ಈಡೇರಿಸುವಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ ಎಂದರು.