ಕಾನೂನು ವ್ಯಾಪ್ತಿಯಲ್ಲಿ ಹೋರಾಟ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಕರು ಸೇರಿದಂತೆ ಇತರರು ರಾಮನಗರ ಜಿಲ್ಲೆ ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿದ್ದರೆನ್ನಲಾದ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.
ಜಿಲ್ಲಾಧಿಕಾರಿ ಸೇರಿದಂತೆ ಇಡೀ ಜಿಲ್ಲಾಡಳಿತವೇ ಇಂದು ಕುಮಾರಸ್ವಾಮಿ ಮತ್ತು ಇತರರ ಭೂಮಿಯನ್ನು ಮುಂಜಾನೆಯಿಂದಲೇ ಸರ್ವೆ ನಡೆಸಿ, ಸುಮಾರು 14ರಿಂದ 18 ಎಕರೆ ಜಾಗ ವಶಕ್ಕೆ ಪಡೆದು ಬೇಲಿ ಹಾಕಿದೆ.
ಬೇಲಿ ಹಾಕುವುದು ಮುಗಿಯುತ್ತಿದ್ದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನ್ನ ಜೀವನದಲ್ಲಿ ಯಾವುದೇ ಅಕ್ರಮ ಎಸಗಿಲ್ಲ, 40 ವರ್ಷಗಳ ಹಿಂದೆ ಖರೀದಿಸಿದ ಭೂಮಿ ಇದಾಗಿದೆ, ಸರ್ಕಾರದ ಷಡ್ಯಂತ್ರ ವಿರುದ್ಧ ಕಾನೂನು ವ್ಯಾಪ್ತಿಯಲ್ಲೇ ಹೋರಾಟ ನಡೆಸುತ್ತೇನೆ ಎಂದಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ
ಕುಮಾರಸ್ವಾಮಿ ಹೇಳಿಕೆಯನ್ನು ಸರ್ಕಾರದ ಪರವಾಗಿ ಸಚಿವ ಎನ್.ಚಲುವರಾಯಸ್ವಾಮಿ ಅಲ್ಲಗಳೆದಿದ್ದು, ಸರ್ಕಾರಿ ಭೂಮಿ ಒತ್ತುವರಿ ಆಗಿರುವುದು ಖಚಿತಗೊಂಡಿದೆ, ಈಗ ಅವರೇ ತೀರ್ಮಾನ ಕೈಗೊಳ್ಳಬೇಕು.
ಎಲ್ಲದಕ್ಕೂ ರಾಜೀನಾಮೆ ಕೇಳುವ ಕುಮಾರಸ್ವಾಮಿ ಒತ್ತುವರಿ ಪ್ರಕರಣದ ನಂತರವೂ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅವರಿಗೇ ಬಿಡುತ್ತೇವೆ, ನಾವು ರಾಜೀನಾಮೆ ಕೇಳುವುದಿಲ್ಲ ಎಂದರು.
ಮುಂದುವರೆದು ಮಾತನಾಡಿದ ಕುಮಾರಸ್ವಾಮಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಭೂಮಿ ಒತ್ತುವರಿ ಸೇರಿದಂತೆ ನಾನು ಯಾವ ಅಕ್ರಮವನ್ನೂ ಮಾಡಿಲ್ಲ, ಮಾಡುವುದೂ ಇಲ್ಲ.
40 ವರ್ಷಗಳ ಹಿಂದೆ ಜಮೀನು ಖರೀದಿ
ನಲವತ್ತು ವರ್ಷಗಳ ಹಿಂದೆ ಖರೀದಿಸಿರುವ ಜಮೀನು ಅದು, ಒಬ್ಬ ಸಾಮಾನ್ಯ ಪ್ರಜೆಗೆ ಯಾವುದೇ ತೆರವು ಮಾಡಬೇಕೆಂದಾದರೂ ಕಾನೂನು ಪ್ರಕಾರ 15 ದಿನಗಳ ಮೊದಲೇ ನೋಟಿಸ್ ನೀಡಬೇಕು.
ಆದರೆ, ನನಗೆ ಈವರೆಗೆ ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡಿಲ್ಲ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ, ಇವರು ಬೆಂಗಳೂರು ನಗರವನ್ನೇ ಲೂಟಿ ಮಾಡುತ್ತಿದ್ದಾರೆ.
ಬೇರೆ ರೀತಿ ಉತ್ತರ
ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಕರಣಕ್ಕೆ ಎಸ್‌ಐಟಿ ರಚನೆ ಮಾಡಿದ್ದಾರೆ, ಇಂತಹ ನಡವಳಿಕೆಗಳಿಗೆ ಒಂದಲ್ಲಾ ಒಂದು ದಿನ ಬೇರೆ ರೀತಿ ಉತ್ತರ ಬರುತ್ತದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಸರ್ಕಾರಕ್ಕೆ ನಾನೇ ಟಾರ್ಗೆಟ್ ಆಗಿದ್ದೇನೆ, ನನ್ನ ಬಿಟ್ಟರೆ ಅವರಿಗೆ ಯಾರೂ ಇಲ್ಲ, ಸದ್ಯ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.
ನಾಲ್ಕು ದಶಕಗಳ ಹಿಂದೆ ಖರೀದಿ ಮಾಡಿದ ಈ ಭೂಮಿಗೆ ಮೂರು ಬಾರಿ ತನಿಖೆಯಾಗಿದೆ, 40 ವರ್ಷದಿಂದಲೂ ತನಿಖೆ ನಡೆಯುತ್ತಲೇ ಇದೆ, ನನ್ನ ಪರಿಸ್ಥಿತಿಯೇ ಹೀಗಾದರೆ, ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಗಾಬರಿಯಾಗಬೇಕಿಲ್ಲ
ಇಂದು ನಡೆಯುತ್ತಿರುವ ಸರ್ಕಾರದ ನಡವಳಿಕೆ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ, ಯಾರೂ ಗಾಬರಿಯಾಗಬೇಕಿಲ್ಲ ಎಂದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮನಗರ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಹೈಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ, ಕೇತಗಾನಹಳ್ಳಿ ಸರ್ವೆ ನಂಬರ್ 7, 8, 9, 10, 16, 17 ಹಾಗೂ 79ರಲ್ಲಿ ಭೂ ಒತ್ತುವರಿ ಆಗಿದೆ ಎಂಬ ಆರೋಪ ಕೇಳಿಬಂದಿತ್ತು.
ಇದರ ಹಿನ್ನೆಲೆಯಲ್ಲಿ ಸರ್ವೇ ನಡೆಸಿ, ಒತ್ತುವರಿ ತೆರವುಗೊಳಿಸಿ ಭೂಮಿ ವಶಕ್ಕೆ ಪಡೆದಿದ್ದೇವೆ, ಇದು ವಿವಿಧ ಮಾಲೀಕರ ಹೆಸರಿನಲ್ಲಿ ಇರುವ ಭೂಮಿಗಳು ಎಂದರು.