ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲೀಂ ಸಮುದಾಯಕ್ಕೆ ಮೀಸಲಾತಿ ನೀಡುವ ಮಸೂದೆಯನ್ನು ಸದನದಲ್ಲಿ ಕದ್ದುಮುಚ್ಚಿ ಮಂಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ಕಣ್ಣು ತಪ್ಪಿಸಿ ಸದನದಲ್ಲಿ ನಿನ್ನೆ ಮಸೂದೆ ಮಂಡಿಸಲಾಗಿದೆ, ಸಿದ್ದರಾಮಯ್ಯ ಸರ್ಕಾರದ ಇಂತಹ ತುಘಲಕ್ ದರ್ಬಾರನ್ನು ಬಿಜೆಪಿ ವಿರೋಧಿಸುತ್ತದೆ, ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಲ್ಲದೆ, ಅಗತ್ಯ ಬಿದ್ದಲ್ಲಿ ರಾಜ್ಯ ಹೈಕೋರ್ಟ್‌ನಲ್ಲೂ ಪ್ರಶ್ನಿಸಲಿದೆ ಎಂದರು.
ಅಲ್ಪಸಂಖ್ಯಾತರ ಓಲೈಕೆ
ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಇತಿಮಿತಿ ಇದೆ, ಅಲ್ಪಸಂಖ್ಯಾತರ ಓಲೈಕೆ ರಾಜಕೀಯ ಮಾಡುತ್ತಿದೆ, ಸ್ವಾತಂತ್ರ್ಯಾ ನಂತರ ದೇಶದಲ್ಲಿ 50-55 ವರ್ಷಗಳ ಸುದೀರ್ಘ ಆಡಳಿತ ನಡೆಸಿದ ಪಕ್ಷ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು ಕೊಟ್ಟು ಸಮಾಜದ ಮುಂಚೂಣಿಗೆ ತರುವ ಕೆಲಸ ಏಕೆ ಮಾಡಲಿಲ್ಲ, ಇಚ್ಛಾಶಕ್ತಿ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬುದಾಗಿ ಬಿಂಬಿಸಲು ಹೊರಟಿದ್ದಾರೆ, ಪಕ್ಷ ಮುಸ್ಲೀಂ ವಿರೋಧಿಯಲ್ಲ, ಅಲ್ಪಸಂಖ್ಯಾತ ಮಹಿಳೆಯರಿಗೆ ನ್ಯಾಯ ಕೊಡಿಸಲು ತ್ರಿವಳಿ ತಲಾಖ್ ರದ್ದು ಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ.
ಎಲ್ಲ ಸಮುದಾಯದಕ್ಕೆ ಸೌಲಭ್ಯ
ಕೇಂದ್ರ ಸರ್ಕಾರದ ಕಾರ್ಯಕ್ರಮಗಳಾದ ಜನ್ ಧನ್ ಖಾತೆ, ಉಜ್ವಲ, ಉಜಾಲ, ವಸತಿ ಸೇರಿದಂತೆ ಅನೇಕ ಯೋಜನೆಗಳನ್ನು ಎಲ್ಲ ಸಮುದಾಯಕ್ಕೂ ಕೊಟ್ಟಿದೆ, ಇವು ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲ ಸಮುದಾಯದವರೂ ಸೌಲಭ್ಯ ಪಡೆದುಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಭಾಗ್ಯಲಕ್ಷ್ಮೀ ಯೋಜನೆಯನ್ನು ಹಿಂದೂಗಳಿಗಾಗಿ ಮಾಡಿರಲಿಲ್ಲ ಎಂದರು.