ಬೆಂಗಳೂರು:ಹನಿಟ್ರ್ಯಾಪ್ ಮೂಲಕ ವಿರೋಧಿಗಳನ್ನು ಮತ್ತು ಪಕ್ಷದ ಮುಖಂಡರನ್ನು ರಾಜಕೀಯವಾಗಿ ಮುಗಿಸಲು ಹೊರಟರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದು ಪಕ್ಷದ ವರಿಷ್ಠರಿಗೆ ಸಚಿವರು ಹಾಗೂ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಇಬ್ಬರು ಪ್ರಭಾವೀ ಸಚಿವರು ಹಾಗೂ ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಅವರುಗಳು, ಪ್ರತ್ಯೇಕವಾಗಿ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.
ನಮ್ಮವರ ಕುಮ್ಮಕ್ಕು ಸಂಶಯ
ಕರ್ನಾಟಕದಲ್ಲಿ ಹನಿಟ್ರ್ಯಾಪ್ ಮಾಡುವ ತಂಡಗಳೇ ಇವೆ, ಇಂತಹ ಕೆಲವು ತಂಡಗಳಿಗೆ ನಮ್ಮವರದೇ ಕುಮ್ಮಕ್ಕು ಇರುವ ಸಂಶಯವಿದೆ.
ಇವರ ಮೂಲಕ ತಮ್ಮ ರಾಜಕೀಯ ವೈರಿಗಳನ್ನು ಮಣಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈಗ ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದೆ.
ನೀವು ತಕ್ಷಣ ಮಧ್ಯೆ ಪ್ರವೇಶ ಮಾಡಿ, ಇಂತಹ ಕುತಂತ್ರಗಳಿಗೆ ಕೊನೆ ಹಾಡಬೇಕು, ಇಲ್ಲದಿದ್ದರೆ ನಾವು ಬಹಿರಂಗವಾಗಿ ಸಿಡಿದೇಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದಕ್ಕೆ ಪರಿಹಾರ ಏನು
ಒಂದು ಹೆಜ್ಜೆ ಮುಂದೆ ಹೋಗಿರುವ ಮಾಜಿ ಪ್ರಧಾನ ಕಾರ್ಯದರ್ಶಿಗಳು, ಕಳೆದ ನಾಲ್ಕೈದು ವರ್ಷಗಳಿಂದ ರಾಜಕೀಯವಾಗಿ ನಡೆದಿರುವ ಹನಿಟ್ರ್ಯಾಪ್ ಸಂಗತಿಗಳನ್ನು ವೇಣುಗೋಪಾಲ್ ಮುಂದಿಟ್ಟು, ಇದಕ್ಕೆ ಏನು ಪರಿಹಾರ ಎಂದು ಪ್ರಶ್ನಿಸಿದ್ದಾರೆ.
ವರಿಷ್ಠರಿಗೆ ದೂರು ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಎಲ್ಲವನ್ನೂ ತಂದಿದ್ದಾರೆ.
ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿ ಜನರ ಕೆಲಸಗಳನ್ನು ಮಾಡುವ ಬದಲು ನಾವು, ನಮ್ಮ ಕುಟುಂಬದ ರಕ್ಷಣೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಹೀಗಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಎಐಸಿಸಿ ಮಧ್ಯೆ ಪ್ರವೇಶ
ಸಚಿವರು ಮತ್ತು ಇತರರು ನೀಡಿರುವ ದೂರನ್ನು ಗಂಭೀರವಾಗಿ ತೆಗೆದುಕೊಂಡಿರುವ ಎಐಸಿಸಿ, ಈಗಾಗಲೇ ಮಧ್ಯೆ ಪ್ರವೇಶ ಮಾಡಿದೆ ಎನ್ನಲಾಗಿದೆ.
ಇದರ ನಡುವೆ ಪ್ರಭಾವೀ ಸಚಿವರೊಬ್ಬರು ವಿಧಾನಸಭೆಯ ಮೊಗಸಾಲೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಲ್ಲದೆ, ತಮ್ಮ ಕುಟುಂಬದವರನ್ನೂ ಹನಿಟ್ರ್ಯಾಪ್‌ಗೆ ಬೀಳಿಸಿದ್ದಾರೆ ಎಂಬ ಕಳವಳ ವ್ಯಕ್ತಪಡಿಸಿದರು.
ನಮ್ಮವರೇ ನಮ್ಮನ್ನು ತುಳಿಯಲು ಹೊರಟಿದ್ದಾರೆ, ಇವರನ್ನು ನಾವು ರಾಜಕೀಯವಾಗಿಯೇ ಎದುರಿಸುವುದಾಗಿ ತಿಳಿಸಿದ್ದಾರೆ.
ಆಪ್ತರಿಗೆ ಮಾಹಿತಿ
ಮತ್ತೊಂದೆಡೆ ಈ ಸಚಿವರುಗಳು ತಮ್ಮ ಮನೆಗಳಲ್ಲೇ ಆಪ್ತ ಸಚಿವರು ಮತ್ತು ಶಾಸಕರ ಸಭೆಗಳನ್ನು ನಡೆಸಿ, ಹನಿಟ್ರ್ಯಾಪ್ ತಂತ್ರದ ಬಗ್ಗೆ ಮಾಹಿತಿ ಮತ್ತು ಎಚ್ಚರಿಕೆ ನೀಡಿದ್ದಾರೆ.
ಸಮುದಾಯದ ಅಭಿವೃದ್ಧಿ ಮತ್ತು ಇತರ ವಿಷಯಗಳ ಹೆಸರಿನಲ್ಲಿ ಕರೆದಿದ್ದ ಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಮಾಹಿತಿ ನೀಡಿದ್ದಾರೆ.