ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮರ್ಯಾದೆಯಾಗಿ ಇದ್ದರೆ ಕ್ಷೇಮ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಧಮಕಿ ಹಾಕಿದ್ದಾರೆ.
ದೆಹಲಿಯಿಂದ ಹಿಂತಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇತಗಾನಹಳ್ಳಿ ಸರ್ಕಾರಿ ಜಮೀನು ಒತ್ತುವರಿ ವಿವಾದ ಕುರಿತು ಪ್ರತಿಕ್ರಿಯಿಸಿ, ಅದಕ್ಕೂ ನನಗೂ ಸಂಬಂಧವಿಲ್ಲ, ಸುಖಾಸುಮ್ಮನೆ ಕುಮಾರಸ್ವಾಮಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ.
ಆರೋಪ ಮಾಡುವುದನ್ನು ಬಿಡಲಿ
ಇನ್ನು ಮುಂದೆ ಇಂತಹ ಆರೋಪ ಮಾಡುವುದನ್ನು ಬಿಟ್ಟು ಮರ್ಯಾದೆಯಿಂದ ಇದ್ದರೆ ಕ್ಷೇಮ ಎಂದು ಹೇಳಿ, ಹೆಚ್ಚಿನ ಮಾತು ಬಳಸದೆ, ತಮ್ಮ ಆಕ್ರೋಶ ಹೊರಹಾಕಿದರು.
ನನ್ನ ವಿರುದ್ಧ ಕುಮಾರಸ್ವಾಮಿ ಮೈಸೂರಿನಲ್ಲಿ ಏನೆಲ್ಲಾ ಮಾತನಾಡಿದರು, ಅವರ ತಂದೆ ಏನು ಮಾತನಾಡಿದ್ದಾರೆ, ನನ್ನ, ಪತ್ನಿ, ತಂಗಿ ಹಾಗೂ ಸಹೋದರನ ಮೇಲೆ ಏನೆಲ್ಲಾ ಮೊಕದ್ದಮೆ ಹೂಡಿದ್ದರು.
ನನಗೂ ಬಳ್ಳಾರಿಗೂ ಸಂಬಂಧವಿಲ್ಲ, ಆದರೂ ಅದಿರು ಕಳ್ಳತನ ಮಾಡಿದ್ದೇನೆಂದು ಆರೋಪಿಸಿ ತನಿಖೆ ಮಾಡಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.
ಸರ್ಕಾರ ಮಾಡಿದ್ದಕ್ಕೆ ಸುಮ್ಮನಿದ್ದೇವೆ
ಅವರ ಜೊತೆ ಸರ್ಕಾರ ಮಾಡಿದ್ದೇವೆ ಎಂಬ ಕಾರಣಕ್ಕೆ ನಾವು ಸುಮ್ಮನಿದ್ದೇವೆ, ಅವರು ಮರ್ಯಾದೆಯಿಂದಿದ್ದರೆ ಕ್ಷೇಮ ಎಂದು ಹರಿಹಾಯ್ದರು.
ದ್ವೇಷ ರಾಜಕಾರಣ ಎಂಬುದು ಅವರ ಡಿಎನ್‌ಎನಲ್ಲಿದೆ, ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ಕೋರ್ಟ್ ಆದೇಶದಂತೆ ಅಧಿಕಾರಿಗಳು ಸರ್ವೆ ಮಾಡಿದ್ದಾರೆ, ಇದರಲ್ಲಿ ನಾವು ಹೇಗೆ ದ್ವೇಷ ರಾಜಕಾರಣ ಮಾಡಿದಂತಾಗುತ್ತದೆ.
ಒತ್ತುವರಿ ಪ್ರಕರಣವನ್ನು ನ್ಯಾಯಾಲಯದಲ್ಲಿ ನಾವು ದಾಖಲಿಸಿದ್ದೇವಾ, ಹಿರೇಮಠ್ ದಾಖಲಿಸಿದ್ದಾರೆ, ಅವರು ನನ್ನ ಮೇಲೂ ಅನೇಕ ಕೇಸ್ ದಾಖಲಿಸಿದ್ದರು, ಅವರ ಅರ್ಜಿ ಮೇರೆಗೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅಧಿಕಾರಿಗಳು ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ದ್ವೇಷದ ರಾಜಕಾರಣ ಏನಿದೆ ಎಂದು ಪ್ರಶ್ನಿಸಿದರು.
ನಮಗೂ ಕಾನೂನು ಗೊತ್ತಿದೆ
ರಾಮನಗರ ಜಿಲ್ಲೆ ಮರುನಾಮಕರಣ ಮಾಡಬಾರದಂತೆ ಕೇಂದ್ರದ ಮೇಲೆ ಒತ್ತಡ ಹಾಕಿದ್ದಾರೆ, ನಮಗೂ ಕಾನೂನು ಗೊತ್ತಿದೆ, ನಾವು ಯಾರನ್ನೂ ಕೇಳುವ ಅಗತ್ಯವಿಲ್ಲ.
ನಾವು ಮಾಹಿತಿ ನೀಡುವಂತೆ ಕೇಳಿ ಪ್ರಸ್ತಾವನೆ ಕಳುಹಿಸಿದ್ದೇವೆ, ದೆಹಲಿಯಲ್ಲಿರುವ ಕೆಲವು ಮಂತ್ರಿಗಳು ಈ ವಿಚಾರದಲ್ಲಿ ಷಡ್ಯಂತ್ರ ನಡೆಸಿದ್ದಾರೆ, ನಾವು ಅದಕ್ಕೆಲ್ಲ ಜಗ್ಗುವುದಿಲ್ಲ.
ಜಿಲ್ಲೆ ಮರುನಾಮಕರಣ ಮಾಡುವುದು ಹೇಗೆ, ಜಿಲ್ಲೆಯನ್ನು ಹೇಗೆ ಬದಲಾಯಿಸಬೇಕು ಎಂಬುದು ಗೊತ್ತಿದೆ, ನಾವು ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡುತ್ತೇವೆ.
ಹೌದು, ರಿಯಲ್ ಎಸ್ಟೇಟ್ ಉದ್ದೇಶ
ಹೌದು, ರಿಯಲ್ ಎಸ್ಟೇಟ್ ಉದ್ದೇಶಕ್ಕೇ ಮಾಡುತ್ತಿದ್ದೇವೆ, ನಮ್ಮ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಜನರಿಗೆ ಅನುಕೂಲ ಆಗಬಾರದೆ, ನೀವು ಅಲ್ಲಿಂದ ಇಲ್ಲಿಗೆ ಯಾಕೆ ಬಂದಿರಿ, ನಮ್ಮ ಜನ ಬೆಂಗಳೂರು ಜಿಲ್ಲೆಯವರು, ಅವರು ಬದುಕಬೇಕು, ನಮ್ಮ ಜಿಲ್ಲೆಯ ಜನರ ಆಸ್ತಿ ಹೋಗಿದೆ, ಅವರಿಗೆ ಒಳ್ಳೆಯದಾಗಲಿ ಎಂಬ ಆಸೆ ನಮ್ಮದು, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ವಿದ್ಯುತ್ ದರ ಪ್ರತಿ ಯೂನಿಟ್‌ಗೆ 36 ಪೈಸೆ ಏರಿಕೆ ವಿಚಾರ ಗೊತ್ತಿಲ್ಲ, ಇಂಧನ ಸಚಿವರ ಬಳಿ ಮಾತನಾಡುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಕೆಲವು ಸಚಿವರ ಹನಿಟ್ರ್ಯಾಪ್ ನಡೆದಿದ್ದರೆ, ಈ ವಿಚಾರವಾಗಿ ಪೋಲಿಸರಿಗೆ ದೂರು ನೀಡಲಿ.
ಹನಿಟ್ರ್ಯಾಪ್ ಮಾಹಿತಿ ಇಲ್ಲ
ಹನಿಟ್ರ್ಯಾಪ್ ಬಗ್ಗೆ ನನಗೆ ಮಾಹಿತಿ ಇಲ್ಲ, ಯಾವುದಾದರೂ ಮಂತ್ರಿ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದರೆ ಅಥವಾ ಸಂಚಿಗೆ ಒಳಗಾಗಿದ್ದರೆ, ಅಂತಹವರು ಪೋಲಿಸರಿಗೆ ದೂರು ನೀಡಲಿ, ತನಿಖೆ ಮಾಡಿಸೋಣ.
ತಮ್ಮ ಹತ್ಯೆಗೆ ಸಂಚು ನಡೆಯುತ್ತಿದೆ ಎಂಬ ಶಾಸಕ ಮುನಿರತ್ನ ಹೇಳಿಕೆ ಕುರಿತು ವಿಧಾನಸಭಾಧ್ಯಕ್ಷರ ಜೊತೆ ಚರ್ಚಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡುತ್ತೇನೆ ಎಂದರು.