ಬೆಂಗಳೂರು:ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೌಪ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿದೆ.
ಕುಮಾರಸ್ವಾಮಿ ಹಾಗೂ ಡಾ.ಪರಮೇಶ್ವರ್ ಆತ್ಮೀಯ ಸ್ನೇಹಿತರಾಗಿದ್ದರೂ ಪ್ರಸಕ್ತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇವರಿಬ್ಬರ ಮುಖಾಮುಖಿ ಭೇಟಿ ಕೆಲವರಲ್ಲಿ ಆಶ್ಚರ್ಯ ಮೂಡಿಸಿದೆ.
ಪದೇ ಪದೇ ಭೇಟಿ
ಕುಮಾರಸ್ವಾಮಿ ಅವರು ತುಮಕೂರು ರಸ್ತೆಯ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ವೇಳೆ ಹಾಗೂ ನಂತರ ಪಂಚತಾರಾ ಹೋಟೆಲ್ ಒಂದರಲ್ಲಿ ಡಾ.ಪರಮೇಶ್ವರ್ ಭೇಟಿಯಾಗಿದ್ದಾರೆ.
ಭೇಟಿ ಅಷ್ಟೇ ಅಲ್ಲದೆ, ಈ ಇಬ್ಬರು ನಾಯಕರು ದೂರವಾಣಿ ಮೂಲಕವೂ ಚರ್ಚೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನಾಯಕತ್ವ ಪೈಪೋಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ನಾಯಕತ್ವಕ್ಕಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆದಿದೆ.
ಈ ಸಂದರ್ಭದಲ್ಲಿ ಕೆಲವರ ವರ್ಚಸ್ಸನ್ನು ಹಾಳು ಮಾಡುವ ಪ್ರಯತ್ನವೂ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದರ ನಡುವೆ ಡಾ.ಪರಮೇಶ್ವರ್, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಜಕೀಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಅವಕಾಶ
ನೀವು ಮುಖ್ಯಮಂತ್ರಿ ಆಗುವ ಅವಕಾಶ ಎರಡು ಬಾರಿ ಕಳೆದುಕೊಂಡಿದ್ದೀರಿ, ಮತ್ತೊಮ್ಮೆ ಅಂತಹ ಅವಕಾಶ ಬಂದರೆ ನಿಮ್ಮ ಬೆನ್ನಿಗೆ ನಿಲ್ಲುವುದಾಗಿ ಡಾ.ಪರಮೇಶ್ವರ್ ಅವರಿಗೆ ಕುಮಾರಸ್ವಾಮಿ ಅಭಯ ನೀಡಿದ್ದಾರಂತೆ.
ರಾಜಕೀಯ ಹೆಜ್ಜೆಗಳನ್ನು ಇಡುವಾಗ ಬಹಳ ಎಚ್ಚರ ವಹಿಸಿ, ನಾನೂ ಕೆಲವರನ್ನು ನಂಬಿ ಆಯ ತಪ್ಪಿದ್ದೇನೆ, ಆದರೆ, ಜನರು ಹಾಗೂ ಕಾರ್ಯಕರ್ತರು ನನ್ನ ಕೈಬಿಡಲಿಲ್ಲ.
ನೀವು ವಿದ್ಯಾವಂತರು, ಸುಸಂಸ್ಕೃತರು ರಾಜ್ಯದ ನಾಯಕತ್ವ ನಿಭಾಯಿಸುವ ಎಲ್ಲಾ ಅರ್ಹತೆ ಇದೆ, ನಿಮಗೆ ಇರುವ ಅವಕಾಶ ಕಳೆದುಕೊಳ್ಳಬೇಡಿ.
ಎದೆಗುಂದ ಬೇಡಿ
ಹೋರಾಟದಿಂದ ನಿಮ್ಮನ್ನು ಹಿಂದೆ ಸರಿಸಲು ರಾಜಕೀಯ ಮೇಲಾಟಗಳು ನಡೆಯುವುದು ಸಹಜ, ಅದಕ್ಕೆ ಎದೆಗುಂದ ಬೇಡಿ.
ರಾಜಕೀಯವಾಗಿ ಸಂಕಷ್ಟಕ್ಕೆ ಸಿಲುಕಿದರೆ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಅಭಯ ನೀಡಿದ್ದಾರಂತೆ.