ಬೆಂಗಳೂರು:ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಕರಣಗಳನ್ನು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿಂದು ಘೋಷಿಸಿದರು.
ಹನಿಟ್ರ್ಯಾಪ್ ಪ್ರಕರಣಗಳಿಂದ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳ ಬದುಕಿಗೆ ಹಾನಿ ಉಂಟು ಮಾಡುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಹಾಗೂ ಮುನಿರತ್ನ ಅವರು ಸದನದಲ್ಲಿ ಮಾಡಿರುವ ಪ್ರಸ್ತಾಪವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.
ಹನಿಟ್ರ್ಯಾಪ್ ಸುದ್ದಿ ಮೊದಲು ಬ್ರೇಕ್ ಮಾಡಿದ್ದು kmskannada.com
ಉನ್ನತ ಮಟ್ಟದ ತನಿಖೆ
ಸಚಿವ ರಾಜಣ್ಣ ತಮಗೆ ಲಿಖಿತ ದೂರು ನೀಡುವುದಾಗಿ ಹೇಳಿದ್ದಾರೆ, ಅವರ ದೂರನ್ನು ಆಧರಿಸಿ ಉನ್ನತ ಮಟ್ಟದ ತನಿಖೆ ನಡೆಸಿ, ಸತ್ಯಾಸತ್ಯತೆ ಬಯಲು ಮಾಡುತ್ತೇನೆ.
ಸದನದ ಪ್ರತಿಯೊಬ್ಬ ಸದಸ್ಯರ ಹಕ್ಕು ಕಾಪಾಡುವುದು ನಮ್ಮ ಕರ್ತವ್ಯ, ಹನಿಟ್ರ್ಯಾಪ್ ಮೂಲಕ ಜನಪ್ರತಿನಿಧಿಗಳ ಗೌರವಕ್ಕೆ ಚ್ಯುತಿ ತರುವುದನ್ನು ಕೊನೆಗಾಣಿಸುತ್ತೇನೆ.
ರಾಜ್ಯ ವಿಧಾನಮಂಡಲಕ್ಕೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಗೌರವ ಇದೆ, ಅದಕ್ಕೆ ಚ್ಯುತಿ ತರಲು ಬಿಡುವುದಿಲ್ಲ, ಈ ಸದನದಲ್ಲಿ ದೊಡ್ಡ ಮಹನೀಯರು ತಮ್ಮ ಆದರ್ಶ ಮತ್ತು ಛಾಪು ಮೂಡಿಸಿದ್ದಾರೆ.
ಸದಸ್ಯರ ಗೌರವಕ್ಕೆ ಚ್ಯುತಿ
ಹನಿಟ್ರ್ಯಾಪ್ ಮೂಲಕ ಸದಸ್ಯರ ಗೌರವಕ್ಕೆ ಚ್ಯುತಿ ತಂದು ಅವರುಗಳ ಕುಟುಂಬದ ಮಾನ ತೆಗೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಬಜೆಟ್ ಮೇಲಿನ ಚರ್ಚೆ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸಚಿವರು, ಶಾಸಕರನ್ನು ಹನಿಟ್ರ್ಯಾಪ್ ಮಾಡಲಾಗಿದೆ.
ಸಹಕಾರಿ ಸಚಿವ ರಾಜಣ್ಣ ಅವರ ಮೇಲೆಯೇ ಹನಿಟ್ರ್ಯಾಪ್ ಆಗಿದೆ, ಇದನ್ನು ಸರ್ಕಾರ ಮಾಡಿಸುತ್ತಿದೆಯೇ ಅಥವಾ ಸರ್ಕಾರದಲ್ಲಿರುವವರು ಮಾಡುತ್ತಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಹನಿಟ್ರ್ಯಾಪ್ ಮಾಡುವವರ ಪತ್ತೆ ಹಚ್ಚಿ
ಗೃಹ ಸಚಿವರೂ ಸದನದಲ್ಲಿದ್ದಾರೆ, ಅವರು ಉತ್ತರ ನೀಡಬೇಕು ಮತ್ತು ಹನಿಟ್ರ್ಯಾಪ್ ಮಾಡುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು, ಇದಕ್ಕೆ ಉನ್ನತ ಮಟ್ಟದ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಸದನದಲ್ಲೇ ಇದ್ದ ರಾಜಣ್ಣ, ನನ್ನ ಹೆಸರನ್ನು ಪ್ರಸ್ತಾಪಿಸಿರುವುದರಿಂದ ನಾನು ವಾಸ್ತವಾಂಶ ತಿಳಿಸಲೇಬೇಕು.
ಕರ್ನಾಟಕ ಎಂದರೆ, ಪೆನ್‌ಡ್ರೈವ್ ಮತ್ತು ಸಿ.ಡಿ. ಫ್ಯಾಕ್ಟರಿ ಎಂಬ ಕುಖ್ಯಾತಿ ಆಗಿದೆ, ಸದನದಲ್ಲಿರುವ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರಲ್ಲದೆ, ರಾಷ್ಟ್ರಮಟ್ಟದ ರಾಜಕಾರಣಿಗಳ 48 ಮಂದಿಯ ಹನಿಟ್ರ್ಯಾಪ್ ನಡೆದಿದೆ.
ಭಾಗಿಯಾಗಿದವರನ್ನು ಹೊರಗೆಳೆಯಬೇಕು
ಇದರ ಹಿಂದಿರುವವರು ಬಹಿರಂಗಗೊಳ್ಳಬೇಕು, ಇದಕ್ಕೆ ಸಂಬಂಧಿಸಿದಂತೆ ನಾನು, ಗೃಹ ಸಚಿವರಿಗೆ ಲಿಖಿತ ದೂರು ನೀಡುತ್ತೇನೆ, ಈ ಸಿ.ಡಿ. ಮತ್ತು ಪೆನ್‌ಡ್ರೈವ್‌ಗಳ ನಿರ್ಮಾಪಕರು, ನಿರ್ದೇಶಕರು, ನಟರು ಸೇರಿದಂತೆ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರನ್ನು ಹೊರಗೆಳೆಯಬೇಕು.
ನನ್ನ ಬಳಿ ಕೆಲವು ಮಹತ್ವದ ದಾಖಲೆಗಳಿವೆ, ಅವುಗಳನ್ನು ಗೃಹ ಸಚಿವರಿಗೆ ದೂರು ಪ್ರತಿಯ ಜೊತೆ ನೀಡುತ್ತೇನೆ.
ಹಾಸನದಲ್ಲಿ ನಡೆದ ಸಿ.ಡಿ. ಮತ್ತು ಪೆನ್‌ಡ್ರೈವ್ ಪ್ರಕರಣ ಬಯಲಾಗಿ ನೂರಾರು ಹೆಣ್ಣುಮಕ್ಕಳ ಬಾಳು ಹಾಳಾಗಿದೆ, ಇನ್ನು ಮುಂದೆ ಇಂತಹ ಕೃತ್ಯಗಳು ರಾಜ್ಯದಲ್ಲಿ ನಡೆಯಬಾರದು.
ಮುಖವಾಡ ಕಳಚಬೇಕು
ಈ ಪಿತೂರಿ ಹಿಂದೆ ಯಾರೆಲ್ಲಾ ಇದ್ದಾರೋ ಅವರ ಮುಖವಾಡ ಕಳಚಬೇಕು, ಗೃಹ ಸಚಿವರು ಇದರತ್ತ ತಕ್ಷಣ ಕಾರ್ಯಮಗ್ನರಾಗಬೇಕು ಎಂದು ಮನವಿ ಮಾಡಿದರು.
ರಾಜಣ್ಣ ಮಾತು ಮುಗಿಸುತ್ತಿದ್ದಂತೆ ಹನಿಟ್ರ್ಯಾಪ್‌ಗೆ ಒಳಗಾಗಿ ಜೈಲು ಸೇರಿದ್ದ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ, ರಾಜಕೀಯ ದ್ವೇಷದಿಂದ ಸಿ.ಡಿ. ಮಾಡಿ ನನ್ನ ಮನೆ ಹಾಳು ಮಾಡಿದರು.
ನಾನೊಬ್ಬನೇ ಅಲ್ಲ, ರಮೇಶ್ ಜಾರಕಿಹೊಳಿ, ಎಚ್.ಡಿ.ರೇವಣ್ಣ ಕುಟುಂಬವನ್ನು ಸಿ.ಡಿ. ಮತ್ತು ಪೆನ್‌ಡ್ರೈವ್ ಫ್ಯಾಕ್ಟರಿ ಮಾಲಿಕ ನಾಶ ಮಾಡಿದ, ನನ್ನ ಮೇಲೆ ಸುಳ್ಳು ರೇಪ್ ಕೇಸ್ ಹಾಕಿಸಿ ಜೈಲಿಗೆ ಹೋಗುವಂತೆ ಮಾಡಿದ.
ನಾನು ರೇಪ್ ಮಾಡಿಲ್ಲ
ನಾನು ರೇಪ್ ಮಾಡಿಲ್ಲ ಬೇಕಿದ್ದರೆ, ಆತ ನಂಬುವ ದೇವರುಗಳ ಮೇಲೆ ಆಣೆ ಮಾಡಲಿ, ನಾನೂ ಮಾಡುತ್ತೇನೆ ಎಂದು ಸದನದಲ್ಲಿ ದೇವರುಗಳ ಚಿತ್ರಗಳನ್ನು ಪ್ರದರ್ಶಿಸಿದರು.
ನನ್ನ ಮೇಲೆ ರೇಪ್ ಆರೋಪ ಮಾಡಿದಾಕೆ ಇರುವುದು ಎಲ್ಲೋ, ನನ್ನ ವಿರುದ್ಧ ರಾಮನಗರದಲ್ಲಿ ಪ್ರಕರಣ ದಾಖಲಿಸಿ, ನಮ್ಮ ಕುಟುಂಬದ ಮಾನ ಹರಾಜು ಮಾಡಿದ, ಈಗಲೂ ನಮ್ಮ ಮೊಮ್ಮಕ್ಕಳು ಬೀದಿಯಲ್ಲಿ ತಲೆ ಎತ್ತಿ ಓಡಾಡದಂತೆ ಆಗಿದೆ.
ನನ್ನ ಮೇಲಿನ ರೇಪ್ ಪ್ರಕರಣವನ್ನು ಸಿಬಿಐಗೆ ವಹಿಸಿ, ಸತ್ಯಾಸತ್ಯತೆ ಹೊರಬರಲಿ, ನೀವು ಇದನ್ನು ಹೀಗೇ ಬಿಟ್ಟರೆ ಅವನು ಉನ್ನತ ಅಧಿಕಾರ ಪಡೆಯಲು ತನ್ನ ವಿರೋಧಿಗಳೆಲ್ಲರನ್ನೂ ಹನಿಟ್ರ್ಯಾಪ್ ಮಾಡುತ್ತಾನೆ ಎಂದು ಗುಡುಗಿದರು.
ಮುನಿರತ್ನ ಮಾತಿಗೆ ಬೆಂಬಲ
ಮುನಿರತ್ನ ಮಾತಿಗೆ ಬೆಂಬಲ ವ್ಯಕ್ತಪಡಿಸಿದ ಸುನೀಲ್ ಕುಮಾರ್, ಸಿ.ಡಿ. ಮತ್ತು ಪೆನ್‌ಡ್ರೈವ್ ಫ್ಯಾಕ್ಟರಿ ಹಿಂದಿರುವ ಕೈಗಳನ್ನು ಬಹಿರಂಗಪಡಿಸಿ, ನಾವು ಸಾರ್ವಜನಿಕ ಜೀವನದಲ್ಲಿ ಇರುವವರು ಕೆಲವು ವಿಷಯಗಳನ್ನು ವಿರೋಧಿಸುತ್ತೇವೆ.
ಹಾಗಂತ, ನಮ್ಮಗಳ ವಿರುದ್ಧ ಹನಿಟ್ರ್ಯಾಪ್ ಮಾಡಿಸಿದರೆ, 224 ಸದಸ್ಯರ ಗತಿ ಏನು, ಉನ್ನತ ಹುದ್ದೆ ಪಡೆಯಲೋ ಅಥವಾ ಬೇರೆ ಉದ್ದೇಶಕ್ಕೋ ಅವರನ್ನು ವಿರೋಧಿಸುವವರನ್ನೆಲ್ಲಾ ಹನಿಟ್ರ್ಯಾಪ್ ಮಾಡುತ್ತಾ ಹೋದರೆ, ಇದು ಎಲ್ಲಿಗೆ ತಲುಪುತ್ತೆ.
ರಾಜ್ಯ ವಿಧಾನಮಂಡಲದ ಗೌರವ ಕಾಪಾಡಲು ಗೃಹ ಸಚಿವರು ಸಿ.ಡಿ., ಪೆನ್‌ಡ್ರೈವ್ ಪ್ರಕರಣಗಳಿಗೆ ಇತಿಶ್ರೀ ಹಾಡಬೇಕು ಎಂದು ಆಗ್ರಹಿಸಿದರು.