ಚೆನ್ನೈ (ತಮಿಳುನಾಡು):ದಕ್ಷಿಣ ಭಾರತ ರಾಜ್ಯಗಳ ಸಂಸತ್ ಸ್ಥಾನಗಳು ಕಡಿಮೆಯಾಗಲು ಬಿಡುವುದಿಲ್ಲ, ನಮ್ಮ ಹಕ್ಕು ಮತ್ತು ಅಸ್ತಿತ್ವಕ್ಕೆ ಹೋರಾಡಲು ಒಗ್ಗಟ್ಟಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ತಮಿಳುನಾಡಿನ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ಸೋಲುವುದಿಲ್ಲ, ನಮ್ಮ ಹೋರಾಟ ನಿರಂತರ, ವೈಯಕ್ತಿಕ ಹಕ್ಕುಗಳಿಗೆ ಹೋರಾಡುತ್ತಿಲ್ಲ, ದೇಶಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಹಕ್ಕುಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನಾಯಕತ್ವದಲ್ಲಿ ದಕ್ಷಿಣ ಭಾರತ ರಾಜ್ಯಗಳು ಹಾಗೂ ಪಂಜಾಬ್ ಈ ಸಭೆಯಲ್ಲಿ ಭಾಗವಹಿಸಿವೆ, ಯಾವುದೇ ಕಾರಣಕ್ಕೂ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ.
ದಕ್ಷಿಣದ ರಾಜ್ಯಗಳು ದೇಶದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡುತ್ತಿವೆ, ಶೈಕ್ಷಣಿಕ ಗುಣಮಟ್ಟ, ಆರ್ಥಿಕ ಬೆಳವಣಿಗೆ ಸೇರಿದಂತೆ ಅನೇಕ ವಿಷಯಗಳಲ್ಲಿ ಸಾಕಷ್ಟು ಮುಂದಿದ್ದೇವೆ, ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದ್ದೇವೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯ ಸಹಾ ಇದೇ ರೀತಿ 2002ರಲ್ಲಿ ಸಂವಿಧಾನಕ್ಕೆ 84ನೇ ತಿದ್ದುಪಡಿ ಮೂಲಕ ಬದಲಾವಣೆ ತರಲು ಮುಂದಾಗಿದ್ದರು.

ಬಿಜೆಪಿಗೆ ಹೆದರುವುದಿಲ್ಲ
ಬಿಜೆಪಿಯ ಕಪ್ಪು ಬಾವುಟ ಪ್ರದರ್ಶನಕ್ಕೆ ಹೆದರುವುದಿಲ್ಲ, ಅವರ ನಡೆಯನ್ನು ಸ್ವಾಗತಿಸುತ್ತೇವೆ, ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದಾಗಲೇ ಹೆದರಲಿಲ್ಲ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೇಂದ್ರದ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕೆಲಸ ಮಾಡಿದ್ದಾರೆ, ನಮ್ಮ ಶಕ್ತಿ ಏನೆಂಬುದು ಅವರಿಗೆ ಗೊತ್ತಿದೆ.
ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಉನ್ನತಿ ಎಂಬುದರಲ್ಲಿ ನಂಬಿಕೆ ಇಟ್ಟಿರುವವರು ನಾವು, ಸಂವಿಧಾನ ಉಳಿವಿಗೆ ಹೋರಾಟ ಮಾಡುತ್ತೇವೆ ಎಂದರು.