ಬೆಂಗಳೂರು:ಮುಸ್ಲೀಮರಿಗಾಗಿ ಮೀಸಲಾತಿ ಕಲ್ಪಿಸಲು ಸಂವಿಧಾನ ಬದಲಾವಣೆ ಹಾಗೂ ಹನಿಟ್ರ್ಯಾಪ್ ವಿಚಾರಗಳು ಭಾರೀ ಚರ್ಚೆಯಲ್ಲಿರುವ ನಡುವೆಯೇ ರಾಜ್ಯ ಸರ್ಕಾರ ಮತ್ತೆ ವಿದ್ಯುತ್ ದರ ಹೆಚ್ಚಳಕ್ಕೆ ಮುಂದಾಗಿದೆ.
ಪ್ರತಿ ಯೂನಿಟ್‌ಗೆ 15ರಿಂದ 20 ಪೈಸೆ ಏರಿಕೆ ಮಾಡಿ ಒಂದರೆಡು ದಿನದಲ್ಲೇ ಆದೇಶ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ 36 ಪೈಸೆ ಹೆಚ್ಚಳ
ವಿದ್ಯುತ್ ಪ್ರಸರಣ ಮತ್ತು ಸರಬರಾಜು ಕಂಪನಿಗಳ ಸಿಬ್ಬಂದಿಯ ಪಿಂಚಣಿ ಹಾಗೂ ಗ್ರ್ಯಾಚುಟಿ ಹಣವನ್ನು ವಿದ್ಯುತ್ ಬಳಕೆದಾರರಿಂದಲೇ ಭರಿಸಲು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ ಈಗಾಗಲೇ ಆದೇಶ ಹೊರಡಿಸಿದೆ.
ಹೆಚ್ಚಳ ದರ ಕೇವಲ ನಿವೃತ್ತ ನೌಕರರ ಹಿತಕ್ಕಾಗಿ, ಇದೀಗ ಹೆಚ್ಚಳ ಮಾಡುತ್ತಿರುವ ದರ ನಿಗಮಗಳ ಮೂಲಸೌಕರ್ಯ ಮತ್ತು ನಷ್ಟ ಭರಿಸಲು.
ಪ್ರತಿ ಯೂನಿಟ್‌ಗೆ 70 ರಿಂದ 90 ಪೈಸೆ ಹೆಚ್ಚಳ ಮಾಡುವಂತೆ ವಿದ್ಯುತ್ ನಿಗಮಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದ್ದವು.
ಮತ್ತೆ 15 ರಿಂದ 20 ಪೈಸೆ ಏರಿಕೆ
ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಿದೆ, ಅದಕ್ಕನುಗುಣವಾಗಿ ಉತ್ಪಾದನೆ ಮತ್ತು ಪ್ರಸರಣಕ್ಕೆ ಒತ್ತು ಕೊಡಬೇಕಿದೆ ಹಾಗೂ ಮೂಲಸೌಕರ್ಯಗಳಿಗೂ ಆದ್ಯತೆ ನೀಡಬೇಕಿರುವುದರಿಂದ ನಮ್ಮ ಕಂಪನಿಗಳ ವಿದ್ಯುತ್ ದರ ಏರಿಕೆ ಮಾಡಲೇಬೇಕೆಂದು ಮನವಿ ಮಾಡಿದ್ದವು.
ಕಂಪನಿಗಳ ಕೋರಿಕೆ ಮತ್ತು ಸಾರ್ವಜನಿಕರ ಅಹವಾಲು ಆಲಿಸಿದ ಆಯೋಗ, ಪ್ರತಿ ಯೂನಿಟ್‌ಗೆ 15 ರಿಂದ 20 ಪೈಸೆ ಹೆಚ್ಚಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಪ್ರತಿ ವರ್ಷ ಮಾರ್ಚ್ ಕೊನೆಯ ಭಾಗದಲ್ಲಿ ಆಯೋಗ ತನ್ನ ವರದಿ ನೀಡಿ, ವಿದ್ಯುತ್ ದರ ಪರಿಷ್ಕರಣೆ ಮಾಡಿ ಮಾರ್ಚ್‌ನಲ್ಲೇ ದರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುತ್ತಿತ್ತು.
ಗ್ರಾಹಕರ ಮೇಲೆ ಹೊರೆ
ಆದರೆ, ಈ ಬಾರಿ ಆಯೋಗ ನಿವೃತ್ತ ನೌಕರರ ಪಿಂಚಣಿ ಮತ್ತು ಗ್ರ್ಯಾಚುಟಿಗಾಗಿ ಹಣ ಭರಿಸಲು ಗ್ರಾಹಕರ ಮೇಲೆ ಹೊರೆ ಹೇರಿತ್ತು.
ಮತ್ತೊಮ್ಮೆ ಮೂಲಸೌಕರ್ಯ ಒದಗಿಸುವ ಮತ್ತು ನಷ್ಟ ಭರಿಸುವ ಕಾರಣಕ್ಕಾಗಿ ವಿದ್ಯುತ್ ನಿಗಮಗಳು ದರ ಹೆಚ್ಚಳಕ್ಕೆ ಅವಕಾಶ ಮಾಡಿಕೊಟ್ಟಿವೆ.