ಬೆಂಗಳೂರು:ಹನಿಟ್ರ್ಯಾಪ್ ಪ್ರಕರಣವನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ.
ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಂತರ ಹನಿಟ್ರ್ಯಾಪ್ ಹಿಂದಿರುವ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದಾರೆ.
ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಂದು ಪ್ರಕರಣವನ್ನು ಸಿಬಿಐ ಇಲ್ಲವೇ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕೆ ಎಂಬ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ದೂರು ದಾಖಲಿಸುವಂತೆ ಸಲಹೆ
ಇದರ ಹಿನ್ನೆಲೆಯಲ್ಲಿ ಪ್ರವಾಸದಲ್ಲಿದ್ದ ರಾಜಣ್ಣ ಅವರನ್ನು ಸಂಪರ್ಕಿಸಿದ ಮುಖ್ಯಮಂತ್ರಿ ಅವರು, ನೀವು ವಿಧಾನಸಭೆಯಲ್ಲಿ ಹೇಳಿದಂತೆ ಗೃಹ ಸಚಿವ ಡಾ.ಪರಮೇಶ್ವರ್ ಅವರಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದರು.
ಮುಖ್ಯಮಂತ್ರಿ ಸಲಹೆ ಮೇರೆಗೆ ರಾಜಣ್ಣ, ಗುರುವಾರ ನೀಡಬೇಕಿದ್ದ ದೂರನ್ನು ಇಂದೇ ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ನೆಲೆಮಂಗಲದ ಬಳಿ ಇರುವ ವೈದ್ಯಕೀಯ ಕಾಲೇಜಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿ ದೂರು ನೀಡಿದರು.
ಪರಮೇಶ್ವರ್ ಸಲಹೆಯಂತೆ ಸದಾಶಿವನಗರದ ಅವರ ಮನೆಯಲ್ಲಿ ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲೇ ಮತ್ತೊಂದು ದೂರಿನ ಪತ್ರವನ್ನು ತಲುಪಿಸಿದರು.
ಹನಿಟ್ರ್ಯಾಪ್‌ಗೆ ಯತ್ನಿಸಿದ ವಿವರ ಬಹಿರಂಗ
ಇದಕ್ಕೂ ಮುನ್ನ ರಾಜಣ್ಣ ತುರ್ತು ಪತ್ರಿಕಾಗೋಷ್ಠಿ ಕರೆದು, ತಮ್ಮ ಮೇಲೆ ಹನಿಟ್ರ್ಯಾಪ್‌ಗೆ ಯತ್ನಿಸಿದ ವಿವರವನ್ನು ಬಹಿರಂಗಪಡಿಸಿದರು.
ಸುದ್ದಿಗೋಷ್ಠಿಗೂ ಮುನ್ನ ರಾಜಣ್ಣ ತಮ್ಮ ಆಪ್ತ ಕಾನೂನು ಹಾಗೂ ಪೋಲಿಸ್ ಅಧಿಕಾರಿಗಳ ಸಲಹೆ ಪಡೆದು ಮೂರು ಪುಟಗಳ ದೂರನ್ನು ಸಿದ್ಧಪಡಿಸಿದ್ದಾರೆ.
ಘಟನೆ ಕುರಿತು ವಿವರ ನೀಡಿದ ಅವರು, ಎರಡು ಬಾರಿ ಒಬ್ಬ ಹುಡುಗ, ಇಬ್ಬರು ಹುಡುಗಿಯರನ್ನು ಪ್ರತ್ಯೇಕವಾಗಿ ಕರೆತಂದು ನನ್ನ ಹನಿಟ್ರ್ಯಾಪ್‌ಗೆ ಯತ್ನಿಸಿದ.
ಎರಡು ಬಾರಿ ಬಂದಿದ್ದ ಹುಡುಗಿಯರು ನೀಲಿ ಜೀನ್ಸ್ ಪ್ಯಾಂಟ್ ಹಾಗೂ ಟಾಪ್ ಧರಿಸಿದ್ದರು, ಅವರ ಭೇಟಿ ಸಂದರ್ಭದಲ್ಲೆಲ್ಲಾ, ನಿಮ್ಮ ಬಳಿ ಖಾಸಗಿಯಾಗಿ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕಿದೆ, ನಮಗೆ ಬಹಳ ಸಮಯ ನೀಡಿ ಎಂದು ಮನವಿ ಮಾಡಿದ್ದರು.
ಎರಡನೇ ಬಾರಿಗೆ ಬಂದಿದ್ದ ಮಹಿಳೆ
ಎರಡನೇ ಬಾರಿಗೆ ಬಂದಿದ್ದ ಮಹಿಳೆ ತಾನು ವಕೀಲೆ ಎಂದು ಪರಿಚಯ ಮಾಡಿಕೊಂಡಿದ್ದರು.
ಅವರುಗಳ ನಡವಳಿಕೆ ಬಗ್ಗೆ ನನಗೆ ಭಾರೀ ಅನುಮಾನ ಕಾಡಿತು, ನಾನು ಅವರಿಗೆ ಹೆಚ್ಚಿನ ಸಮಯ ನೀಡಲಿಲ್ಲ ಎಂದರು.
ನನ್ನ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ಅವರುಗಳು ಭೇಟಿ ನೀಡಿದ ದೃಶ್ಯಗಳು ಲಭ್ಯವಿಲ್ಲ, ಆದರೆ, ಆ ಹುಡುಗ ಮತ್ತು ಹುಡುಗಿಯರನ್ನು ಗುರುತು ಹಿಡಿಯಬಲ್ಲೆ.
ಗುರುತು ಹಿಡಿಯಬಲ್ಲೆ
ಮನೆಗೆ ಬಂದವರ ವಿವರ ತಿಳಿಯಲು ಪ್ರಯತ್ನಿಸಿದೆ, ಆದರೆ, ಯಾವುದೇ ಮಾಹಿತಿ ಸಿಕ್ಕಿಲ್ಲ, ಅವರ ಫೋಟೋ ತೋರಿಸಿದರೆ ಗುರುತು ಹಿಡಿಯಬಲ್ಲೆ ಎಂದರು.
ನಾನು ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆಗೆ ಇಂದಿಗೂ ಬದ್ಧನಾಗಿದ್ದೇನೆ, ಆಡಳಿತ ಪಕ್ಷ ಮಾತ್ರವಲ್ಲ, ಪ್ರತಿಪಕ್ಷದವರು ಮತ್ತು ದೆಹಲಿ ನಾಯಕರೂ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ.
ನ್ಯಾಯಾಧೀಶರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂಬುದಾಗಿ ನಾನು ಹೇಳಿಲ್ಲ, ಎಲ್ಲ ಪಕ್ಷದ ನಾಯಕರ ಮೇಲೆ ಕಳಂಕ ತರಲು ಈ ರೀತಿ ಮಾಡಿದ್ದಾರೆಂದು ಹೇಳಿದ್ದೇನೆ.
ಗೃಹ ಸಚಿವರಿಗೆ ಬಿಟ್ಟ ವಿಚಾರ
ನನ್ನ ಪತ್ರದ ಆಧಾರದ ಮೇಲೆ ಗೃಹ ಸಚಿವರು ಯಾವುದೇ ರೀತಿಯ ತನಿಖೆ ನಡೆಸುವುದು ಅವರಿಗೆ ಬಿಟ್ಟ ವಿಚಾರ ಎಂದರು.
ಸಂಜೆ ಪರಮೇಶ್ವರ್ ಭೇಟಿ ನಂತರ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ದೂರು ನೀಡಿದ್ದೇನೆ, ಅವರು, ಎಸ್‌ಐಟಿ ರಚನೆ ಮಾಡುತ್ತಾರೋ, ಇಲ್ಲವೇ ಎಡಿಜಿಪಿ ಶ್ರೇಣಿ ಅಧಿಕಾರಿಯಿಂದ ತನಿಖೆ ನಡೆಸುತ್ತಾರೋ ಅವರಿಗೆ ಬಿಟ್ಟ ವಿಚಾರ.
ನಾನು ದೂರು ನೀಡುವುದಕ್ಕೂ ಮುನ್ನವೇ ಗೃಹ ಸಚಿವರು ತಮ್ಮ ಇಲಾಖೆಯಿಂದ ಒಂದಷ್ಟು ಮಾಹಿತಿ ಮತ್ತು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಸಮಾಲೋಚಿಸಿ ತೀರ್ಮಾನ
ಅವರು, ನನ್ನ ದೂರು ಮತ್ತು ತಮ್ಮಲ್ಲಿರುವ ದಾಖಲೆಗಳ ಸಮೇತ ಮುಖ್ಯಮಂತ್ರಿ ಬಳಿ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಪಕ್ಷದ ವರಿಷ್ಠರನ್ನೂ ಭೇಟಿ ಮಾಡಿ ದೂರು ನೀಡಲಿದ್ದೇನೆ ಎಂದ ರಾಜಣ್ಣ, ಈಗಾಗಲೇ ಅವರಿಗೂ ಇದರ ಬಗ್ಗೆ ಒಂದಷ್ಟು ಮಾಹಿತಿಗಳಿವೆ ಎಂದು ತಿಳಿಸಿದರು.