ಬೆಂಗಳೂರು:ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಾಯಕತ್ವ ನೀಡಿದರೆ, ನಮ್ಮ ಒಂದು ಗುಂಪು ಸರ್ಕಾರದಿಂದ ಹೊರಬಂದು ಎನ್‌ಡಿಎ ಜೊತೆ ಕೈಜೋಡಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಳಿ ಹೇಳಿಕೊಂಡಿದ್ದಾರೆ.
ಸಂಸತ್ ಭವನದಲ್ಲಿನ ಜಿ-12 ಕೊಠಡಿಯಲ್ಲಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಜಾರಕಿಹೊಳಿ ಮುಖಾಮುಖಿ ಚರ್ಚೆ ಮಾಡಿದ್ದಾರೆ.
ಹನಿಟ್ರ್ಯಾಪ್ ಬೆಳವಣಿಗೆ
ಈ ವೇಳೆ ಶಿವಕುಮಾರ್ ವಿರುದ್ಧವೇ ಹರಿಹಾಯ್ದಿರುವ ಜಾರಕಿಹೊಳಿ, ಹನಿಟ್ರ್ಯಾಪ್ ಪ್ರಕರಣದ ಇತ್ತೀಚಿನ ಬೆಳವಣಿಗೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಶಿವಕುಮಾರ್ ವಾಲ್ಮೀಕಿ ಸಮುದಾಯ ಮತ್ತು ಅದರ ಮುಖಂಡರನ್ನು ದಮನ ಮಾಡಲು ಹೊರಟಿದ್ದಾರೆ.
ಯಡಿಯೂರಪ್ಪ ಸಂಪುಟದಲ್ಲಿ ಬೃಹತ್ ನೀರಾವರಿ ಸಚಿವರಾಗಿದ್ದ ತಮ್ಮ ಸಹೋದರ ರಮೇಶ್ ಜಾರಕಿಹೊಳಿ ವಿರುದ್ಧ ಹನಿಟ್ರ್ಯಾಪ್ ನಡೆಸಿ ಅವರನ್ನು ರಾಜಕೀಯವಾಗಿ ಬಲಿ ತೆಗೆದುಕೊಂಡರು.
ಐದಾರು ಬಾರಿ ಸಂಚು
ಇದೀಗ ನಮ್ಮ ಸಮುದಾಯಕ್ಕೆ ಸೇರಿದ ರಾಜಣ್ಣ ಅವರ ಮೇಲೆ ಐದಾರು ಬಾರಿ ಹನಿಟ್ರ್ಯಾಪ್ ಸಂಚನ್ನು ಕೆಲವರು ರೂಪಿಸಿದ್ದರು.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನನ್ನ ಮೇಲೂ ಇಂತಹ ಪ್ರಯತ್ನ ನಡೆದಿತ್ತು ಎಂಬ ಮಾಹಿತಿ ನೀಡಿರುವುದಲ್ಲದೆ, ವಿಧಾನಸಭೆಯಲ್ಲಿ ರಾಜಣ್ಣ ಅವರು, 48 ಮಂದಿ ಹನಿಟ್ರ್ಯಾಪ್‌ಗೆ ಒಳಗಾಗಿದ್ದಾರೆ ಎಂಬ ಹೇಳಿಕೆ ಸತ್ಯ.
ಅದರ ಪೂರ್ಣ ಮಾಹಿತಿ ರಾಜಣ್ಣ ಅವರ ಬಳಿ ಇದೆ, ಅವರಿಗೆ ಈ ದಾಖಲೆ ಮತ್ತು ಸಿ.ಡಿ. ಮತ್ತು ಪೆನ್‌ಡ್ರೈವ್‌ಗಳು ಯಾವ ರೀತಿ ದೊರೆತಿವೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಮಾಹಿತಿ, ದಾಖಲೆ ಲಭ್ಯ
ಸಿದ್ದರಾಮಯ್ಯ ಸಂಪುಟದ ಮತ್ತೋರ್ವ ಸಚಿವ ಮತ್ತು ರಾಜಣ್ಣ ಅವರ ಮೇಲೆ ಇಂತಹ ಯತ್ನ ನಡೆದಾಗ, ಆ ತಂಡದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮಾಹಿತಿ ಮತ್ತು ದಾಖಲೆ ಲಭ್ಯವಾಗಿವೆ.
ಇಷ್ಟಾದರೂ ಪಕ್ಷದ ವರಿಷ್ಠರು ಕೆಲವರ ರಕ್ಷಣೆಗೆ ಮುಂದಾಗಿದ್ದಾರೆ, ನಾನು ನಿನ್ನೆ ಪಕ್ಷದ ಕೆಲವು ನಾಯಕರ ಭೇಟಿ ಸಂದರ್ಭದಲ್ಲಿ ಅವರಿಗೆ ಎಲ್ಲವನ್ನೂ ವಿವರಿಸಿದ್ದೇನೆ.
ಇಷ್ಟಾದರೂ ಮುಖ್ಯಮಂತ್ರಿ ಅವರ ಮೇಲೆ ಉನ್ನತ ಮಟ್ಟದ ತನಿಖೆ ನಡೆಸದಂತೆ ದೆಹಲಿ ಮಟ್ಟದ ನಾಯಕರು ಒತ್ತಡ ಹೇರಿದ್ದಾರೆ, ಇದಕ್ಕೆ ನಮ್ಮ ವಿರೋಧವಿದೆ, ಅದಕ್ಕೆ ನಾವು ಅವಕಾಶವನ್ನೂ ನೀಡುವುದಿಲ್ಲ.
ರಾಜಕೀಯ ನಿರ್ಧಾರಕ್ಕೆ ಸಿದ್ಧ
ಹನಿಟ್ರ್ಯಾಪ್ ಬೆದರಿಕೆಗಳಿಗೆ ಇತಿಶ್ರೀ ಹಾಡಲು ನಾನು, ರಾಜಣ್ಣ ಸೇರಿದಂತೆ ಕೆಲವು ಮುಖಂಡರು ರಾಜಕೀಯವಾಗಿ ಎಂತಹ ನಿರ್ಧಾರ ಕೈಗೊಳ್ಳಲೂ ಸಿದ್ಧ ಎಂದಿದ್ದಾರೆ.
ನೀವು ಶಿವಕುಮಾರ್ ವಿರುದ್ಧ ರಾಜಕೀಯವಾಗಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಸತೀಶ್ ಜಾರಕಿಹೊಳಿ ಅವರು ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ.
ಭೇಟಿ, ಮಾತುಕತೆ ನಂತರ ಕುಮಾರಸ್ವಾಮಿ ಮತ್ತು ಜಾರಕಿಹೊಳಿ ಸಂಸತ್ ಭವನದ ಆವರಣದಲ್ಲೇ ಬಿಜೆಪಿಯ ಇಬ್ಬರು ಪ್ರಭಾವೀ ಸಚಿವರನ್ನು ಭೇಟಿ ಮಾಡಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.