ಬೆಂಗಳೂರು:ಹನಿಟ್ರ್ಯಾಪ್ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದ್ದು, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ, ತಮ್ಮ ಕೊಲೆ ಯತ್ನವೂ ನಡೆದಿತ್ತು ಎಂದು ದೂರು ದಾಖಲಿಸಿದ್ದಾರೆ.
ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ರಾಜಣ್ಣ ನೀಡಿರುವ ದೂರು ಹಾಗೂ ರಾಜೇಂದ್ರ ಮಾಡಿರುವ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ 14 ದಿನದಲ್ಲಿ ವರದಿ ನೀಡುವಂತೆ ಸಿಐಡಿಗೆ ಪೋಲಿಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಆದೇಶಿಸಿದ್ದಾರೆ.
ಮಾಹಿತಿ ಆಧರಿಸಿ ತನಿಖೆ
ಪೋಲಿಸ್ ಮಹಾನಿರ್ದೇಶಕರ ಆದೇಶದ ಮೇರೆಗೆ ಸಿಐಡಿ, ಬಿಎನ್‌ಎಸ್‌ಎಸ್ ಪ್ರಕಾರ ಎಫ್‌ಐಆರ್ ದಾಖಲಿಸದೆ, ದೂರುದಾರರು ನೀಡಿರುವ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಹನಿಟ್ರ್ಯಾಪ್ ಪ್ರಕರಣ ಹೆಚ್ಚುವರಿ ತನಿಖೆಗೆ ವಹಿಸಲು ಅರ್ಹವೇ ಎಂಬ ಬಗ್ಗೆಯಷ್ಟೇ ಪ್ರಾಥಮಿಕ ತನಿಖೆ ನಡೆದಿದೆ.
ಒಂದು ವೇಳೆ ಪೂರ್ಣ ಪ್ರಮಾಣದ ತನಿಖೆಗೆ ಅರ್ಹತೆ ಹೊಂದಿದೆ ಎಂದಾದರೆ, ಪೋಲಿಸ್ ಮಹಾನಿರ್ದೇಶಕರಿಗೆ ಸಿಐಡಿ ವರದಿ ನೀಡಲಿದೆ.
ವರದಿ ಆಧಾರದಲ್ಲಿ ತನಿಖೆ ತೀರ್ಮಾನ
ಈ ವರದಿ ಆಧಾರದ ಮೇಲೆ ಪೋಲಿಸ್ ಮಹಾನಿರ್ದೇಶಕರು ಯಾವ ತನಿಖೆ ನಡೆಸಬೇಕೆಂಬ ತೀರ್ಮಾನ ಕೈಗೊಳ್ಳಲಿದ್ದಾರೆ.
ರಾಜೇಂದ್ರ ನೀಡಿರುವ ಕೊಲೆ ಯತ್ನದ ಆರೋಪ ಮತ್ತು ಹನಿಟ್ರ್ಯಾಪ್‌ಗೂ ಸಂಬಂಧವಿದೆಯೇ ಎಂಬ ಕುರಿತು ಸಿಐಡಿ ಇದೇ ವೇಳೆ ತನಿಖೆ ನಡೆಸಿದೆ.
ಸಚಿವರ ಪುತ್ರ ರಾಜೇಂದ್ರ ಪೋಲಿಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಮೇಲೆ ಕೊಲೆ ಯತ್ನ ನಡೆದಿರುವ ಮಾಹಿತಿಯನ್ನು ನೀಡಿದ್ದಾರೆ.
ತುಮಕೂರು ಎಸ್‌ಪಿಗೆ ದೂರು
ರಾಜೇಂದ್ರ ಅವರ ದೂರನ್ನು ಆಲಿಸಿದ ಪೋಲಿಸ್ ಮಹಾನಿರ್ದೇಶಕರು, ತುಮಕೂರು ಪೋಲಿಸ್ ವರಿಷ್ಠಾಧಿಕಾರಿಗೆ ದೂರು ನೀಡುವಂತೆ ಸಲಹೆ ಮಾಡುವ ಜೊತೆಗೆ ಹನಿಟ್ರ್ಯಾಪ್ ಮತ್ತು ಕೊಲೆ ಯತ್ನ ಘಟನೆಗಳಿಗೆ ಸಂಬಂಧವಿದೆಯೇ ಎಂಬ ಬಗ್ಗೆ ಸಿಐಡಿ ತನಿಖೆಗೂ ಆದೇಶಿಸಿದರು.
ಡಿಜಿಪಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ, ನನ್ನ ಮೇಲೆ ಹನಿಟ್ರ್ಯಾಪ್ ಆಗಿಲ್ಲ, ಕಳೆದ ನವೆಂಬರ್ 16ರಂದು ಮಗಳ ಹುಟ್ಟುಹಬ್ಬಕ್ಕೆ ಶಾಮಿಯಾನ ಹಾಕಲು ಬಂದವರು, ನನ್ನ ಮೇಲೆ ಹಲ್ಲೆ ಅಥವಾ ಕೊಲೆ ಮಾಡಬೇಕು ಎಂಬ ಉದ್ದೇಶದಿಂದ ಬಂದಿದ್ದರು, ಆದರೆ, ಅವರ ಪ್ರಯತ್ನ ಸಫಲವಾಗಲಿಲ್ಲ.
ಜನವರಿ ತಿಂಗಳಲ್ಲಿ ನನ್ನ ಕೊಲೆ ಸಂಚು ನಡೆದಿರುವ ಮಾಹಿತಿಯನ್ನು ಅನಾಮಿಕ ವ್ಯಕ್ತಿಯೊಬ್ಬ ದೂರವಾಣಿ ಮೂಲಕ ಮಾಹಿತಿ ನೀಡಿದ.
ಕೊಲೆ ಸಂಚು ಮಾಹಿತಿ
ನಿಮ್ಮ ಮಗಳ ಹುಟ್ಟುಹಬ್ಬದ ದಿನ ನಿಮ್ಮನ್ನು ಕೊಲೆ ಮಾಡಬೇಕೆಂಬ ಯೋಜನೆ ರೂಪಿಸಲಾಗಿದೆ, ಕೊಲೆಗಾರನಿಗೆ ಐದು ಲಕ್ಷ ರೂಪಾಯಿ ಸಂದಾಯವಾಗಿದೆ ಎಂಬ ಮಾಹಿತಿ ನೀಡಿದ, ಜೊತೆಗೆ ಕೆಲವರ ಹೆಸರನ್ನೂ ತಿಳಿಸಿದ.
ಆ ಆಡಿಯೊವನ್ನು ಡಿಜಿಗೆ ಕೊಟ್ಟೆ, ಅವರು ಎಸ್‌ಪಿ ಅವರಿಗೆ ಕೊಡಿ ಎಂದು ಹೇಳಿದ್ದಾರೆ, ನಾಳೆ ತುಮಕೂರು ಎಸ್‌ಪಿ ಅವರನ್ನು ಭೇಟಿ ಮಾಡಿ ದೂರು ಕೊಡುತ್ತೇನೆ.
ನನ್ನ ಫೋನ್‌ಗೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಹತ್ಯೆ ಯತ್ನದ ದೂರು ನೀಡಿದ್ದೇನೆ, ನನ್ನ ಕೊಲೆಗೆ ಸೋಮ, ಭರತ್ ಎಂಬುವವರು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.
ಗಂಭೀರ ವಿಷಯವಾಗಿದೆ
ಜನವರಿಯಲ್ಲಿ ನನಗೆ ಮಾಹಿತಿ ಬಂದಾಗ ಅದು ತಮಾಷೆ ಎಂದುಕೊಂಡಿದ್ದೆ, ಆದರೆ, ಅದು ಈಗ ಗಂಭೀರವಾಗಿದೆ.
ನನ್ನ ಮನೆಯಲ್ಲಿ ಸಿಸಿಟಿವಿ ಇದೆ, ಅದನ್ನು ತನಿಖಾಧಿಕಾರಿಗಳು ಪರಿಶೀಲಿಸಬೇಕು, ಇಬ್ಬರು ಬಂದಿದ್ದರು ಎಂಬುದು ಆಡಿಯೊದಲ್ಲಿದೆ ಎಂದರು.