ಬೆಂಗಳೂರು:ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಕ್ಕೆ ಬಂದ ನಂತರ ವಿವಿಧ ದರಗಳನ್ನು ಏರಿಸುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೆ ಹಾಲು, ವಿದ್ಯುತ್ ದರ ಏರಿಕೆ ಮೂಲಕ ರಾಜ್ಯದ ಜನತೆಗೆ ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಹೋಳಿಗೆ ಕೊಡುಗೆಯಾಗಿ ನೀಡುತ್ತಿದೆ ಎಂದಿದ್ದಾರೆ.
3ನೇ ಬಾರಿ ಹಾಲಿನ ದರ ಹೆಚ್ಚಳ
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಹಾಲಿನ ದರ ಹೆಚ್ಚಳದ ಹಾಲಾಹಲ ಶುರುವಾಗಿದೆ, 3ನೇ ಸಲ ದರ ಏರಿಕೆ ಮಾಡಲಾಗಿದೆ, 2023ರ ಆಗಸ್ಟ್‌ನಲ್ಲಿ 3 ರೂ., 2024ರ ಜೂನ್‌ನಲ್ಲಿ 2 ರೂ. ಹಾಗೂ ಇದೀಗ 4 ರೂ. ಏರಿಕೆ ಮಾಡಲಾಗಿದೆ.
ವಿದ್ಯುತ್ ದರವನ್ನೂ ಹೆಚ್ಚಿಸುವ ಮೂಲಕ ಜನತೆ ವಿದ್ಯುತ್ ಸ್ಪರ್ಶ ಮಾಡದೆಯೇ ಶಾಕ್‌ಗೆ ಒಳಗಾಗಿದ್ದಾರೆ.
ವಿದ್ಯುತ್ ದರ ಪ್ರತೀ ಯೂನಿಟ್‌ಗೆ 36 ಪೈಸೆ ಏರಿಸಲಾಗಿದೆ, ಇದರಿಂದ ಮಹಾದೇವಪ್ಪನಿಗೂ ಶಾಕು, ಕಾಕಾ ಪಾಟೀಲ್‌ಗೂ ಶಾಕು ಎಂಬಂತಾಗಿದೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದ್ದಾರೆ.
ರಾವಣರೂಪಿ ಸುಲಿಗೆ
ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನವಾಗುತ್ತಿದೆ.
ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ, ಹಾಲು ದರ ಏರಿಕೆಗೆ ರೈತರ ನೆಪ, ಲಾಭ ಕೆಎಂಎಫ್‌ಗೆ, ರಾಜ್ಯ ಸರ್ಕಾರ ಕಂಪನಿ ಆಡಳಿತ ನಡೆಸುತ್ತಿದೆ.
ಮೊಸರು ದರ 4 ರೂ. ಏರಿಕೆ ಮಾಡಿದ್ದೀರಿ, ಇದನ್ನು ಯಾರಿಗೆ ಕೊಡುತ್ತೀರಿ, ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ಉಳಿಸಿಕೊಳ್ಳಲಿದೆಯೋ ಸ್ಪಷ್ಟಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದು ಪ್ರಜಾಪ್ರಭುತ್ವ ಸರ್ಕಾರವಲ್ಲ, ದರ ಏರಿಕೆ, ತೆರಿಗೆ ಹೇರಿಕೆ ಸರ್ಕಾರ, ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ, ಜನರ ಸುಲಿಗೆಯೇ ಇದರ ನಿತ್ಯ ಕೃತ್ಯವಾಗಿದೆ, ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಎಂದು ವ್ಯಂಗ್ಯವಾಡಿದ್ದಾರೆ.