ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ಮೇಲೆ ಹಿಡಿತ ಸಾಧಿಸಿದ್ದರೆ ನಾಯಕತ್ವ ವಿಚಾರದಲ್ಲಿ ಸಂದಿಗ್ಧಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವರಿಷ್ಠರಿಗೆ ವರದಿ ನೀಡಿದ್ದಾರೆ.
ಪಕ್ಷ ಸಂಘಟನೆ, ಸರ್ಕಾರದ ಕಾರ್ಯವೈಖರಿ, ಜಿಲ್ಲಾ, ತಾಲ್ಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಸವಿಸ್ತಾರ ವರದಿಯೊಂದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ.
ಗೊಂದಲಗಳಿಗೆ ಅವಕಾಶ
ಕೆಪಿಸಿಸಿ ಅಧ್ಯಕ್ಷ ಗಾದಿ ಹಾಗೂ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ವ್ಯಕ್ತವಾದ ವಿಭಿನ್ನ ಅಭಿಪ್ರಾಯಗಳ ಸಂದರ್ಭದಲ್ಲೇ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿದ್ದರೆ, ಇಷ್ಟೊಂದು ಗೊಂದಲಗಳಿಗೆ ಅವಕಾಶ ಆಗುತ್ತಿರಲಿಲ್ಲ.
ಕೆಲವು ಸಚಿವರಂತೂ ಯಾರನ್ನೋ ಬೆದರಿಸುವ ಉದ್ದೇಶದಿಂದ ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರ ಜೊತೆ ಸಂಪರ್ಕವನ್ನೂ ಬೆಳೆಸಿದ್ದು, ನೀವು ಈ ವಿಷಯದಲ್ಲಿ ಮಧ್ಯೆಪ್ರವೇಶ ಮಾಡಿ ಸರಿಪಡಿಸಬೇಕೆಂದು ಕೋರಿದ್ದಾರೆ.
ಜೊತೆ ಜೊತೆಯಲ್ಲೇ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡಬೇಕಿದ್ದು, ಇವುಗಳನ್ನು ಪಕ್ಷಕ್ಕಾಗಿ ದುಡಿದವರಿಗೆ ಮೀಸಲಿಡಬೇಕು.
ಕಾರ್ಯಕರ್ತರನ್ನು ಗುರುತಿಸಿ
ಚುನಾವಣೆಯಲ್ಲಿ ಸ್ಪರ್ಧಿಸಲಾಗದ ಸಣ್ಣ-ಪುಟ್ಟ ಸಮುದಾಯಗಳ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ಕೊಡಿ.
ಆಯ್ಕೆ ವಿಚಾರದಲ್ಲಿ ನೀವು ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ಮಾಡಿ ನಾಮನಿರ್ದೇಶನಕ್ಕೆ ಅವಕಾಶ ಮಾಡಿಕೊಡಿ ಎಂದಿದ್ದಾರೆ.
ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕೆಲವು ನಿರ್ಧಾರಗಳು ಗೊಂದಲವಾಗಿರುವುದಲ್ಲದೆ, ವಿರೋಧ ಪಕ್ಷಗಳಿಂದ ಭಾರೀ ಪ್ರತಿಭಟನೆ ಎದುರಾಗುತ್ತಿವೆ.
ಸ್ಮಾರ್ಟ್ ಮೀಟರ್ ಖರೀದಿ ಗೊಂದಲ
ಉದಾಹರಣೆಗೆ ವಿದ್ಯುತ್ ಸ್ಮಾರ್ಟ್ ಮೀಟರ್ ಖರೀದಿ ವಿಚಾರದಲ್ಲಿ ಸರ್ಕಾರ ಮತ್ತು ಪಕ್ಷ ಗೊಂದಲದಲ್ಲಿ ಸಿಲುಕುವ ಸಾಧ್ಯತೆ ಇದೆ.
ಈ ಬಗ್ಗೆ ಇಂಧನ ಖಾತೆ ಸಚಿವ ಮತ್ತು ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ಮಾಡಿ ಹಾಲಿ ಟೆಂಡರ್ ರದ್ದುಗೊಳಿಸಿ, ಹೊಸ ಟೆಂಡರ್ ಕರೆಯಲು ಸೂಚಿಸುವಂತೆ ಕೋರಿದ್ದಾರೆ.
ಜಿಲ್ಲಾ, ತಾಲ್ಲೂಕು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಿದ್ಧವಿದೆ, ಮೇ, ಜೂನ್‌ನಲ್ಲಿ ಈ ಚುನಾವಣೆಗಳನ್ನು ನಡೆಸಲು ಸಂಬಂಧಪಟ್ಟ ಸಂಸ್ಥೆಗಳು ಮುಂದಾದರೆ ನಾವೂ ಸಿದ್ಧ.
ಅಧಿಕಾರಕ್ಕೆ ಎರಡು ವರ್ಷ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ, ಕೆಳಮಟ್ಟದ ಕಾರ್ಯಕರ್ತರಿಗೆ ಅಧಿಕಾರ ನೀಡಲು ಸಾಧ್ಯವಾಗಿಲ್ಲ.
ಎಲ್ಲಾ ನಿಗಮ, ಮಂಡಳಿ, ಸಹಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ನಿರ್ದೇಶನ ನೀಡುವಂತೆಯೂ ಶಿವಕುಮಾರ್ ಕೋರಿದ್ದಾರೆ.
ಬರುವ ಮೇನಲ್ಲಿ ಸರ್ಕಾರಕ್ಕೆ ಎರಡು ವರ್ಷಗಳು ತುಂಬಲಿದ್ದು, ವಿಭಾಗೀಯ ಮಟ್ಟದಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಿ ನಮ್ಮ ಸಾಧನೆಗಳನ್ನು ಬಿಂಬಿಸೋಣ, ಈ ಎಲ್ಲಾ ಕಾರ್ಯಕ್ರಮಗಳಿಗೆ ನೀವೂ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.