ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲೀಂ ಸಮುದಾಯಕ್ಕೆ ಸರ್ಕಾರಿ ಗುತ್ತಿಗೆಯಲ್ಲಿ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸುವುದೂ ಸೇರಿದಂತೆ ಅವರ ಓಲೈಕೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ತುಷ್ಟೀಕರಣ ಸರ್ಕಾರ
ಬಡವರು, ರೈತರು, ಕೂಲಿಕಾರ್ಮಿಕರಿಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸದೆ, ಕೇವಲ ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣಕ್ಕೆ ಸರ್ಕಾರ ಮುಂದಾಗಿದೆ.
ಸಿದ್ದರಾಮಯ್ಯ ಸರ್ಕಾರ ಬಂದ ದಿನದಿಂದಲೂ ಮುಸ್ಲೀಂ ಸಮುದಾಯವನ್ನು ಓಲೈಸುತ್ತಿದೆ, ಇವರಿಗೆ ಬೇರೆ ಸಮುದಾಯಗಳು ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು.
ಸರ್ಕಾರದ ಈ ನೀತಿ ವಿರೋಧಿಸಿ ಏಪ್ರಿಲ್ 2ರಿಂದ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ.
ಹಿಂದೂತ್ವ ವಿರೋಧಿ ನೀತಿ
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಹಿರಿಯ ಶಾಸಕರ ಜೊತೆಗೂಡಿ ಸರ್ಕಾರದ ಹಿಂದೂತ್ವ ವಿರೋಧಿ ನೀತಿಯನ್ನು ಜನರಿಗೆ ತಲುಪಿಸಲಾಗುವುದು.
ಪಕ್ಷದಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ವಿಷಯ ತಮಗಾಗಲಿ ಅಥವಾ ತಮ್ಮ ತಂದೆ ಯಡಿಯೂರಪ್ಪ ಅವರಿಗಾಗಲಿ ಸಂಬಂಧಿಸಿಲ್ಲ, ಇದು ವರಿಷ್ಠರ ತೀರ್ಮಾನ ಎಂದರು.
ತಾವು ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಯತ್ನಾಳ್ ನಮ್ಮ ಕುಟುಂಬದ ವಿರುದ್ಧ ಹಾದಿಬೀದಿಯಲ್ಲಿ ಟೀಕೆ ಮಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದೆ
ವರಿಷ್ಠರು ಮೇಲಿಂದ ಮೇಲೆ ಎಚ್ಚರಿಕೆ ನೀಡಿದರೂ ತಮ್ಮ ನಡವಳಿಕೆ ಬದಲಾಯಿಸಿಕೊಳ್ಳಲಿಲ್ಲ, ರಾಜ್ಯಾಧ್ಯಕ್ಷನಾಗಿ ನಾನೇ ಸ್ವತಃ ವಿಧಾನಸಭಾ ಅಧಿವೇಶನ ನಡೆಯುತ್ತಿರುವ ವೇಳೆ ಹಾಗೂ ನಂತರ ಅವರನ್ನು ಸಂಪರ್ಕಿಸಿ, ಏನೇ ಸಮಸ್ಯೆ ಇದ್ದರೂ ಮುಖಾಮುಖಿ ಭೇಟಿ ಮಾಡಿ, ಕುಳಿತು ಬಗೆಹರಿಸಿಕೊಳ್ಳೋಣ ಎಂಬುದಾಗಿ ಮನವಿ ಮಾಡಿದ್ದೆ.
ಅಲ್ಲದೆ, ಔತಣಕೂಟಕ್ಕೂ ಅವರನ್ನು ಖುದ್ದಾಗಿ ಆಹ್ವಾನಿಸಿದ್ದೆ, ಆದರೆ, ಅವರು ಎಂದೂ ನನ್ನ ಆಹ್ವಾನಕ್ಕೆ ಮನ್ನಣೆ ನೀಡಲಿಲ್ಲ.
ಇಷ್ಟೆಲ್ಲಾ ಆದರೂ, ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ರಾಜ್ಯಾಧ್ಯಕ್ಷನಾಗಿ ವರಿಷ್ಠರಿಗೆ ದೂರು ನೀಡಲಿಲ್ಲ.
ಎರಡು ಬಾರಿ ನೋಟಿಸ್
ರಾಜ್ಯ ಬಿಜೆಪಿ ಬೆಳವಣಿಗೆಗಳನ್ನು ಗಮನಿಸಿದ ವರಿಷ್ಠರು ಅವರಿಗೆ ಎರಡು ಬಾರಿ ನೋಟಿಸ್ ನೀಡಿ ನಂತರ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ಉಚ್ಛಾಟನೆ ವಿಷಯದಲ್ಲಿ ನಮ್ಮ ಕುಟುಂಬದ ಪಾತ್ರ ಇಲ್ಲ, ಸಾರ್ವಜನಿಕವಾಗಿ ಇನ್ನು ಮುಂದಾದರೂ ಇಂತಹ ತಪ್ಪು ಅಭಿಪ್ರಾಯಗಳು ಬರಬಾರದು ಎಂದು ಮನವಿ ಮಾಡಿದರು.