ಬೆಂಗಳೂರು:ಹನಿಟ್ರ್ಯಾಪ್ ಹಾಗೂ ಕೊಲೆ ಯತ್ನ ಸಂಚು ಬೆಳಕಿಗೆ ಬಂದ ಬೆನ್ನಲ್ಲೇ ಆತಂಕಗೊಂಡ ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಆಯ್ದ ಹಿರಿಯ ಸಚಿವರಿಗೆ ದೆಹಲಿಗೆ ಬುಲಾವ್ ಮಾಡಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಳೆದ ಮೂರ‍್ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿ ವರಿಷ್ಠರ ಜೊತೆ ನಿರಂತರ ಸಮಾಲೋಚನೆ ನಡೆಸಿ ಕರ್ನಾಟಕ ಸರ್ಕಾರ ಮತ್ತು ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳ ವಿವರ ನೀಡಿದ ನಂತರ ವರಿಷ್ಠರು ಈ ಬುಲವ್ ಮಾಡಿದ್ದಾರೆ.
ಆಪ್ತ ಸಚಿವರೂ ದೆಹಲಿಗೆ
ವರಿಷ್ಠರ ಕರೆಯಂತೆ ಮುಖ್ಯಮಂತ್ರಿ ಸೇರಿದಂತೆ ಆಪ್ತ ಬಳಗದ ಸಚಿವರು ಏಪ್ರಿಲ್ 2ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯ ನಾಯಕರೊಂದಿಗೆ ಏಪ್ರಿಲ್ 3ರಂದು ಇಡೀ ದಿನ ಸಭೆ ನಡೆಸಲಿದ್ದಾರೆ.
ಶಿವಕುಮಾರ್ ಅವರಿಗೆ ಅಂದಿನ ಸಭೆಗೆ ಇದುವರೆಗೂ ಆಹ್ವಾನ ಬಂದಿಲ್ಲ, ಆದರೆ, ಅವರು, ಅದುವರೆಗೂ ದೆಹಲಿಯಲ್ಲೇ ತಮ್ಮ ಪ್ರವಾಸ ಮುಂದುವರೆಸುವರೋ ಅಥವಾ ರಾಜ್ಯಕ್ಕೆ ಹಿಂತಿರುಗುವರೋ ಎಂಬುದು ಕಾದು ನೋಡಬೇಕಿದೆ.
ಕೆ.ಎನ್.ರಾಜಣ್ಣ ಹೇಳಿಕೆ ಹಿನ್ನೆಲೆ
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಹನಿಟ್ರ್ಯಾಪ್ ಪ್ರಯತ್ನ ನಡೆದಿತ್ತು, ಅಲ್ಲದೆ, ಆಡಳಿತ, ಪ್ರತಿಪಕ್ಷ, ಕೆಲವು ದೆಹಲಿ ನಾಯಕರೂ ಸೇರಿದಂತೆ 48 ಮಂದಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದಾರೆ ಎಂದು ಬಹಿರಂಗಪಡಿಸಿದ್ದರು.
ತಮ್ಮ ಬಳಿ ಕೆಲವು ದಾಖಲೆಗಳಿದ್ದು ಅವೂ ಸೇರಿದಂತೆ ಗೃಹ ಸಚಿವರಿಗೆ ದೂರು ನೀಡುತ್ತೇನೆ, ಅವರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.
ರಾಜಣ್ಣ ಅವರ ಹೇಳಿಕೆ ರಾಜ್ಯದಲ್ಲಷ್ಟೇ ಸಂಚಲನ ಉಂಟು ಮಾಡಿದ್ದಲ್ಲದೆ, ಈ ವಿಷಯ ರಾಜ್ಯಸಭೆಯಲ್ಲೂ ಪ್ರಸ್ತಾಪವಾಯಿತು.
ಇಕ್ಕಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು
ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಎದ್ದ ವಿವಾದ ಕಾಂಗ್ರೆಸ್ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿ, ರಾಷ್ಟ್ರಮಟ್ಟದಲ್ಲಿ ಚರ್ಚೆಗೊಂಡ ನಂತರ ರಾಜ್ಯಾಧ್ಯಕ್ಷ ಶಿವಕುಮಾರ್ ಅವರನ್ನೇ ದೆಹಲಿಗೆ ಕರೆಸಿಕೊಂಡು ಮಾಹಿತಿ ಪಡೆಯಲಾಯಿತು.
ಇದರ ನಡುವೆ ಮುಖ್ಯಮಂತ್ರಿ ಹಾಗೂ ಅವರ ಬೆಂಬಲಿತ ಸಚಿವರು ಏಪ್ರಿಲ್ 4ರ ನಂತರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಹನಿಟ್ರ್ಯಾಪ್ ಮತ್ತಿತರ ವಿಷಯ ಕುರಿತು ಪ್ರಸ್ತಾಪಿಸಲು ತೀರ್ಮಾನಿಸಿದ್ದರು.
ಈ ಭೇಟಿ ಸಂದರ್ಭದಲ್ಲಿ ವಿಧಾನ ಪರಿಷತ್ತಿಗೆ ನಾಲ್ಕು ಸದಸ್ಯರ ನಾಮನಿರ್ದೇಶನ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಜೊತೆ ಚರ್ಚಿಸಲು ನಿರ್ಧರಿಸಿದ್ದರು.
ಸುರ್ಜೇವಾಲ ಆಹ್ವಾನ
ಆದರೆ, ಹಠಾತ್ತಾಗಿ ರಾಜ್ಯ ಉಸ್ತುವಾರಿ ಸುರ್ಜೇವಾಲ, ನಿನ್ನೆ ಮುಖ್ಯಮಂತ್ರಿ ಹಾಗೂ ಕೆಲವು ಸಚಿವರನ್ನು ಸಂಪರ್ಕಿಸಿ, ಎಐಸಿಸಿ ಅಧ್ಯಕ್ಷರು ೩ರಂದು ತಮ್ಮನ್ನು ಭೇಟಿ ಮಾಡಿ ಚರ್ಚಿಸಲು ಆಹ್ವಾನ ನೀಡಿದ್ದು ದೆಹಲಿಗೆ ಬನ್ನಿ ಎಂದು ಸಂದೇಶ ನೀಡಿದರು.
ವರಿಷ್ಠರ ಕರೆ ಮೇರೆಗೆ ಯುಗಾದಿ, ರಂಜಾನ್ ನಂತರ ದೆಹಲಿಗೆ ಮುಖ್ಯಮಂತ್ರಿ ತಂಡ ತೆರಳಲಿದೆ.