ಬೆಂಗಳೂರು:ಹನಿಟ್ರ್ಯಾಪ್ ಪ್ರಕರಣವನ್ನು ವಿಧಾನಸಭೆಯಲ್ಲೇ ಪ್ರಸ್ತಾಪಿಸಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮೇಲೆ ಕಾಂಗ್ರೆಸ್ ವರಿಷ್ಠರ ಕೆಂಗಣ್ಣು ಬಿದ್ದಿದ್ದು, ಮಂತ್ರಿಗಿರಿಗೂ ಸಂಚಕಾರ ಬಂದಿದೆ.
ರಾಷ್ಟ್ರವ್ಯಾಪಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಲ್ಲದೆ, ರಾಜಣ್ಣ ವಿರುದ್ಧ ಕಿಡಿಕಾರಿದ್ದು ಬೆಳಕಿಗೆ ಬಂದಿದೆ.
ಮಂತ್ರಿ ಸ್ಥಾನದಿಂದ ವಜಾ ಮಾಡಿ
ಈ ಸಚಿವರು ಪದೇ ಪದೇ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಲೇ ಇದ್ದಾರೆ, ಇವರುಗಳನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಶಿಸ್ತು ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದರು.
ವೇಣುಗೋಪಾಲ್ ಅವರ ಸಲಹೆ ಆಲಿಸಿದ ಮುಖ್ಯಮಂತ್ರಿ, ತಾವು ದೆಹಲಿಗೆ ಬಂದಾಗ ಈ ಸಂಬಂಧ ಚರ್ಚಿಸಿ, ಪಕ್ಷದ ಆದೇಶದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದರು.
ಆದರೆ, ಕೆಪಿಸಿಸಿ ಅಧ್ಯಕ್ಷರು ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ಸವಿಸ್ತಾರ ವರದಿಯನ್ನು ಈಗಾಗಲೇ ಎಐಸಿಸಿ ಅಂಗಳಕ್ಕೆ ಮುಟ್ಟಿಸಿದ್ದಾರೆ.
ಪಕ್ಷದ ವೇದಿಕೆ ಗಮನಕ್ಕೆ
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುವ ಮುನ್ನ ಪಕ್ಷದ ವೇದಿಕೆಯಲ್ಲಿ, ಇಲ್ಲವೇ ಹೈಕಮಾಂಡ್ ಗಮನಕ್ಕೆ ತರಬೇಕಿತ್ತು.
ಇದನ್ನು ಬಿಟ್ಟು ಏಕಾಏಕಿ ಸದನದಲ್ಲೇ ವಿಷಯ ಪ್ರಸ್ತಾಪಿಸಿ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.
ಸದನದಲ್ಲಿ ನೀಡಿದ ಹೇಳಿಕೆಯಂತೆ ಹನಿಟ್ರ್ಯಾಪ್ ಪ್ರಕರಣದ ದಾಖಲೆಗಳು ಮತ್ತು ಸಮರ್ಪಕ ದೂರನ್ನು ಇದುವರೆಗೂ ನೀಡಲು ಸಾಧ್ಯವಾಗಿಲ್ಲ.
ಸೂಕ್ತ ದಾಖಲೆ ಇಲ್ಲದೆ ಪ್ರಸ್ತಾಪ
ಸೂಕ್ತ ದಾಖಲೆಗಳಿಲ್ಲದೆ, ವಿಷಯ ಪ್ರಸ್ತಾಪಿಸಿದ್ದಾದರೂ ಏತಕ್ಕೆ, ಇದರ ಹಿಂದಿನ ಉದ್ದೇಶವೇನು, ಸಚಿವರ ಇಂತಹ ಹೇಳಿಕೆ ಸಂಸತ್‌ನ ಉಭಯ ಸದನಗಳಲ್ಲೂ ಚರ್ಚೆಗೆ ಗ್ರಾಸ ಮಾಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಸಂಸತ್‌ನಲ್ಲಷ್ಟೇ ಅಲ್ಲದೆ, ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೂ ಹತ್ತುವಂತಾಯಿತು, ಇದಕ್ಕೆಲ್ಲಾ ರಾಜಣ್ಣ ಅವರ ಹಠಾತ್ ನಿರ್ಧಾರಗಳೇ ಕಾರಣ.
ಈ ಹಿಂದೆಲ್ಲಾ, ಎರಡು-ಮೂರು ಬಾರಿ ರಾಜಣ್ಣ ಸೇರಿದಂತೆ ಕೆಲವು ಸಚಿವರಿಗೆ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಿದ್ದರೂ, ಮುಜುಗರಕ್ಕೆ ಈಡಾಗುವಂತಹ ಹೇಳಿಕೆಗಳನ್ನು ನೀಡುತ್ತಲೇ ಇದ್ದರು.
ಇದೇ ರೀತಿ ಮುಂದುವರೆದರೆ ಪಕ್ಷದಲ್ಲಿ ಶಿಸ್ತು ಎಂಬುದೇ ಇರುವುದಿಲ್ಲ, ಒಂದಿಬ್ಬರ ಮೇಲೆ ಕ್ರಮ ಜರುಗಿಸಿದರೆ, ಉಳಿದವರಿಗೆ ಎಚ್ಚರಿಕೆ ಗಂಟೆಯಾಗುತ್ತದೆ ಎಂದಿದ್ದಾರೆ ವರಿಷ್ಠರು.