ಬೆಂಗಳೂರು:ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಕಳೆದ 20 ತಿಂಗಳಿಂದ ರಾಜ್ಯದ ಜನರಿಗೆ ಬೆಲೆ ಏರಿಕೆ ಗ್ಯಾರಂಟಿ ದಯಪಾಲಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು, ವಿದ್ಯುತ್, ನೀರು, ಪೆಟ್ರೋಲ್, ಡೀಸೆಲ್ ದರ, ಸ್ಟ್ಯಾಂಪ್ ಶುಲ್ಕ, ಮೆಟ್ರೊ ದರ ಏರಿಸುವ ಮೂಲಕ ಜನಸಾಮಾನ್ಯರ ಬದುಕು ಹೊರೆಯಾಗುವಂತೆ ಮಾಡಿದ್ದಾರೆ ಎಂದರು.
ಜನತೆ ರೋಸಿ ಹೋಗಿದ್ದಾರೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಎಂದರೆ ಒಂದು ಕೈಯಿಂದ ಕೊಡುವುದು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುವುದಾಗಿದೆ, ಇಂತಹ ನೀತಿಯಿಂದ ರಾಜ್ಯದ ಜನತೆ ರೋಸಿ ಹೋಗಿದ್ದಾರೆ.
ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದ್ದು, ಜನಸಾಮಾನ್ಯರ ಬದುಕು ಬಹಳ ದುಸ್ತರವಾಗಿದೆ, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ನಾಳೆ ಬೆಳಗ್ಗೆ 11 ಗಂಟೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಾಗುವುದು.
ಬಿಜೆಪಿ ಶಾಸಕರು, ವಿಧಾನ ಪರಿಷತ್‌ನ ಹಾಲಿ ಹಾಗೂ ಮಾಜಿ ಸದಸ್ಯರು, ರಾಜ್ಯಾದ್ಯಂತ ಪಕ್ಷದ ಎಲ್ಲ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಶೋಷಿತ ಸಮುದಾಯಗಳಿಗೆ ಅನ್ಯಾಯ
ಪರಿಶಿಷ್ಟ ಜಾತಿ, ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ 38 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಸಿದ್ದರಾಮಯ್ಯ ಶೋಷಿತ, ಪೀಡಿತ ಸಮುದಾಯಗಳಿಗೆ ಅನ್ಯಾಯ ಎಸಗಿದ್ದಾರೆ.
ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲೀಮರಿಗೆ ಶೇ.4ರಷ್ಟು ಮೀಸಲಾತಿ ನೀಡಿರುವುದು ಸಂವಿಧಾನ ವಿರೋಧಿ ಮಾತ್ರವಲ್ಲದೆ, ಹಿಂದೂಗಳನ್ನು ಅಪಮಾನಿಸುವುದಾಗಿದೆ.
ಪಾದಯಾತ್ರೆ ಮೂಲಕ ಹೋರಾಟ
ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ, ಏಪ್ರಿಲ್ 7ರಂದು ಚಾಮುಂಡಿ ತಾಯಿ ದರ್ಶನ ಪಡೆದು ಪಾದಯಾತ್ರೆ ಮೂಲಕ ಹೋರಾಟ ಆರಂಭಿಸಲಾಗುವುದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ನೆಲೆಸಿರುವ ಪರಮಪೂಜ್ಯ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಜಯಂತ್ಯುತ್ಸವವನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.