ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಬಾರಿಯ ದೆಹಲಿ ಭೇಟಿ, ರಾಜ್ಯ ರಾಜಕೀಯ ಮತ್ತು ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸುವ ಲಕ್ಷಣಗಳು ಕಂಡುಬರುತ್ತಿವೆ.
ಹನಿಟ್ರ್ಯಾಪ್ ಪ್ರಕರಣ ರಾಷ್ಟ್ರವ್ಯಾಪಿ ಪ್ರಚಾರ ಪಡೆದು ಪಕ್ಷಕ್ಕೆ ಮುಜುಗರ ತಂದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಕೆಲವು ಆಯ್ದ ಸಚಿವರನ್ನು ದೆಹಲಿಗೆ ಬರುವಂತೆ ಪಕ್ಷದ ವರಿಷ್ಠರು ಬುಲಾವ್ ಮಾಡಿದ್ದಾರೆ.
ವಿಶೇಷ ವಿಮಾನದಲ್ಲಿ ದೆಹಲಿಗೆ
ವರಿಷ್ಠರ ಆದೇಶದ ಮೇರೆಗೆ ನಾಳೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಸೇರಿದಂತೆ ಕೆಲವು ಸಚಿವರು ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳುತ್ತಿದ್ದಾರೆ.
ಹನಿಟ್ರ್ಯಾಪ್ ಪ್ರಕರಣ ಸಂಸತ್‌ನ ಉಭಯ ಸದನಗಳಲ್ಲಿ ಪ್ರಸ್ತಾಪಗೊಂಡಿರುವುದು ಹಾಗೂ ಸುಪ್ರೀಂಕೋರ್ಟ್ ಏರುವಂತೆ ಆಗಿದ್ದು, ಪ್ರಕರಣದ ಬಗ್ಗೆ ಪೋಲಿಸರಿಗೆ ದೂರು ನೀಡಿದವರು ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾದ ವಿಚಾರದಲ್ಲಿ ಸಹಕಾರಿ ಸಚಿವ ರಾಜಣ್ಣ ಕೇಂದ್ರ ಬಿಂದುವಾಗಿದ್ದಾರೆ.
ರಾಜಣ್ಣ ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಟ್ಟು ಶಿಸ್ತು ಕ್ರಮಕ್ಕೆ ವರಿಷ್ಠರು ಮುಂದಾಗಿದ್ದಾರೆ, ಆದರೆ, ಇದನ್ನು ಮುಖ್ಯಮಂತ್ರಿ ಅವರು ಹೇಗೆ ನಿಭಾಯಸುತ್ತಾರೆ ಎಂಬುದೇ ಕುತೂಹಲವಾಗಿದೆ.
ಈಗಾಗಲೇ ಗೌಪ್ಯ ವರದಿ
ಸರ್ಕಾರಕ್ಕೆ ಎರಡು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಸಚಿವರ ಹಾಗೂ ಆಡಳಿತದ ಕಾರ್ಯವೈಖರಿ, ಪಕ್ಷ ಸಂಘಟನೆಯಲ್ಲಿ ಅಧಿಕಾರಸ್ತರ ಪಾತ್ರದ ಕುರಿತು ಈಗಾಗಲೇ ಗೌಪ್ಯ ವರದಿ ತರಿಸಿಕೊಂಡಿದ್ದಾರೆ.
ಏಪ್ರಿಲ್ 3ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಜೊತೆ ಮಾತುಕತೆ ವೇಳೆ ಸರ್ಕಾರ ಮತ್ತು ಪಕ್ಷದ ವಿಚಾರಗಳಿಗೆ ಸಂಬಂಧಿಸಿದಂತೆ ಮಖ್ಯಮಂತ್ರಿ ಮತ್ತು ಸಚಿವರುಗಳ ಜೊತೆ ಈ ವಿಚಾರಗಳು ಪ್ರಸ್ತಾಪವಾಗಲಿವೆ.
ಹನಿಟ್ರ್ಯಾಪ್ ಪ್ರಕರಣ, ಪಕ್ಷದ ವಿಧಾನ ಪರಿಷತ್ ಸದಸ್ಯರೊಬ್ಬರ ಹತ್ಯೆಗೆ ಸುಪಾರಿ ವಿಚಾರದ ಬಗ್ಗೆ ವರಿಷ್ಠರು ಮುಖ್ಯಮಂತ್ರಿ ಅವರಿಂದ ಮಾಹಿತಿ ಪಡೆಯಲಿದ್ದಾರೆ.
ಪಕ್ಷದಲ್ಲಿ ಅಪಸ್ವರಗಳು
ಅಲ್ಲದೆ, ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಪಕ್ಷದಲ್ಲಿ ಅಪಸ್ವರಗಳು ಕೇಳಿಬರುತ್ತಿದ್ದು, ಅಧ್ಯಕ್ಷರ ಮುಂದುವರಿಕೆ ಅಥವಾ ಬದಲಾವಣೆಗೆ ಸಂಬಂಧಿಸಿದಂತೆ ವರಿಷ್ಠರು ಸ್ಪಷ್ಟ ಸಂದೇಶ ನೀಡಲಿದ್ದಾರಂತೆ.
ಭ್ರಷ್ಟಾಚಾರ ಆರೋಪದ ಮೇಲೆ ಮಂತ್ರಿ ಸ್ಥಾನ ಕಳೆದುಕೊಂಡು ಜೈಲು ಸೇರಿದ್ದ ಬಿ.ನಾಗೇಂದ್ರ ಅವರೊಬ್ಬರನ್ನು ಮಾತ್ರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಆಸಕ್ತಿ ಹೊಂದಿದ್ದು, ವರಿಷ್ಠರು ಹಸಿರು ನಿಶಾನೆ ತೋರುವರೇ ಎಂಬುದನ್ನು ಕಾದು ನೋಡಬೇಕಿದೆ.
ವಿಧಾನ ಪರಷತ್ತಿನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಪಕ್ಷ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಾಲ್ವರ ಹೆಸರನ್ನು ವರಿಷ್ಠರ ಗಮನಕ್ಕೆ ತಂದು ಆಯ್ಕೆ ಮಾಡುವ ಯತ್ನ ನಡೆಯಲಿದೆ.
ಕರ್ನಾಟಕ ಭವನ (ಕಾವೇರಿ) ಕಟ್ಟಡ
ದೆಹಲಿ ಭೇಟಿ ಸಂದರ್ಭದಲ್ಲೇ ಕರ್ನಾಟಕ ಭವನ (ಕಾವೇರಿ) ಕಟ್ಟಡ ಉದ್ಘಾಟನೆ, ಅಲ್ಲದೆ, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಕೆಲವು ಸಚಿವರ ಭೇಟಿ ಕಾರ್ಯಕ್ರಮವಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.
ಮುಖ್ಯಮಂತ್ರಿ ಅವರು ಇದೇ ಸಂದರ್ಭದಲ್ಲಿ ನಿಗಮ-ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರಾಗಿ ಕಾರ್ಯಕರ್ತರ ನೇಮಕಾತಿ ಬಗ್ಗೆಯೂ ವರಿಷ್ಠರೊಂದಿಗೆ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಿದ್ದಾರೆ.
ಇದೆಲ್ಲಕ್ಕೂ ಮಿಗಿಲಾಗಿ ಕಾಂತರಾಜ್ ವರದಿ ಜಾರಿಗೊಳಿಸಲು ಸಿದ್ದರಾಮಯ್ಯ ವರಿಷ್ಠರ ಅನುಮೋದನೆಗೆ ಪ್ರಸ್ತಾವ ಮಂಡಿಸಲಿದ್ದಾರಂತೆ.
ಶೇಕಡ 74ರಷ್ಟು ಮೀಸಲಾತಿ
ವರದಿ ಪ್ರಕಾರ ಅತ್ಯಂತ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ಅಗತ್ಯವಿದೆ, ಒಟ್ಟಾರೆ ಕರ್ನಾಟಕದಲ್ಲಿ ಶೇಕಡ 74ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ತಮಿಳುನಾಡಿನಲ್ಲಿ ಶೇಕಡ 60ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ, ನಾವು ಕಾಂತರಾಜ್ ವರದಿ ಆಧಾರವಾಗಿಟ್ಟುಕೊಂಡು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಲು ಮುಂದಾಗಿದ್ದೇವೆ.
ಕಾತರಾಜ್ ವರದಿ ಅನುಷ್ಟಾನಕ್ಕೆ ಒಪ್ಪಿಗೆ ನೀಡುವಂತೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿ ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಒಪ್ಪಿಗೆ ಪಡೆಯಲು ಮುಂದಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.