ಬೆಂಗಳೂರು:ಕರ್ನಾಟಕದಲ್ಲಿ ’ದರ ಬೀಜಾಸುರ’ ಸರ್ಕಾರ ಜನರ ರಕ್ತ ಹೀರುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರ್ಕಾರ ಕಸದ ಮೇಲೂ ಸೆಸ್ ವಿಧಿಸುತ್ತಿದೆ, ದಿನಕ್ಕೊಂದು ಸುಳ್ಳು ಹೇಳಿ, ತಿಂಗಳಿಗೊಂದು ವಸ್ತುವಿನ ದರ ಏರಿಕೆ ಮಾಡುತ್ತಿದೆ ಎಂದಿದ್ದಾರೆ.
ಜನರ ಲೂಟಿ
ದರ ಏರಿಕೆಗೆ ಪಂಚ ಗ್ಯಾರಂಟಿ ನೆಪ ಮಾಡಿಕೊಳ್ಳುತ್ತಿದೆ, ಸರ್ಕಾರದ ದುರುದ್ದೇಶ, ಜನರ ಲೂಟಿ ಮಾಡುವುದಷ್ಟೇ ಆಗಿದೆ.
ಭಾರತದ ಮೇಲೆ ಆಕ್ರಮಣ ನಡೆಸಿ ನಿರಂತರ ಲೂಟಿ ಮಾಡಿದ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ನಾಚುವಂತೆ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಮೇಲೆ ದರ ಏರಿಕೆ ಸಮರ ನಡೆಸುತ್ತಿದೆ.
ಕಾಂಗ್ರೆಸ್ ದುರಾಡಳಿತದಿಂದ ಸಮೃದ್ಧ ಕರ್ನಾಟಕ ಹಾಳಾಗುತ್ತಿದ್ದು, ದರ ಬೀಜಾಸುರ ರೂಪ ತಳೆದು ಜನರ ರಕ್ತ ಹೀರುತ್ತಿದೆ ಎಂದರು.
ಎಲ್ಲ ದರಗಳ ಏರಿಕೆ
ನೀರು, ಮೆಟ್ರೋ ರೈಲು, ಬಸ್ ಪ್ರಯಾಣ, ಹಾಲು, ವಿದ್ಯುತ್ ದರ, ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ, ಅಬ್ಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣಪತ್ರ ದರ, ಲ್ಯಾಬ್‌ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರ ಏರಿಕೆ ಮಾಡಿದೆ.
ಇಷ್ಟು ಸಾಲದೆಂಬಂತೆ ಜನರ ಮೇಲೆ ಏಪ್ರಿಲ್ 1ರಿಂದ ಕಸದ ಸೆಸ್ ಹೇರುವ ಮೂಲಕ ಕೋಟಿ ಕೋಟಿ ರೂ. ಸುಲಿಗೆಯ ಗುರಿ ಹಾಕಿಕೊಂಡಿದೆ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದರೆ ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರ್ಕಾರ ಎಲ್ಲ ದಾಖಲೆ ಮೀರಿಸುತ್ತಿದೆ ಎಂದಿದ್ದಾರೆ.