ಬೆಂಗಳೂರು:ರಾಜ್ಯದಲ್ಲಿ ಗೂಂಡಾಗಿರಿ, ರೌಡಿಸಂ ಸಂಪೂರ್ಣ ಮಟ್ಟ ಹಾಕಲು ಪೋಲಿಸ್ ಇಲಾಖೆಗೆ ಎಲ್ಲ ಅಗತ್ಯ ಸಹಕಾರ, ಸವಲತ್ತು ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಘೋಷಿಸಿದರು.
ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮೂರು ವರ್ಷಗಳ ಮುಖ್ಯಮಂತ್ರಿಗಳ ಪದಕಗಳನ್ನು ಒಟ್ಟಾಗಿ ಪ್ರದಾನ ಮಾಡಿ ಮಾತನಾಡಿದ ಅವರು, ಕರ್ತವ್ಯಲೋಪ ಸಹಿಸುವುದಿಲ್ಲ, ಪೊಲೀಸ್ ಬೀಟ್ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದರು.
ಸೈಬರ್ ಅಪರಾಧ ನಿಗ್ರಹಿಸಿ
ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳೂ ಹೆಚ್ಚುತ್ತಿವೆ, ಅದೇ ತಂತ್ರಜ್ಞಾನ ಬಳಸಿಕೊಂಡು ಸೈಬರ್ ಅಪರಾಧಗಳನ್ನು ನಿಗ್ರಹಿಸಬೇಕು.
ಮಾದಕ ವಸ್ತು ಮುಕ್ತ ರಾಜ್ಯ ಮಾಡುವುದು ನನ್ನ ಗುರಿ, ಮಾದಕ ವಸ್ತು ಜಾಲವನ್ನು ಬೇರು ಸಮೇತ ಕಿತ್ತುಹಾಕಲು ಪೊಲೀಸರು ಪಣ ತೊಡಬೇಕು.
ಕಳೆದ ಎರಡು ವರ್ಷಗಳಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತಿದೆ, ಆದರೂ, ಇನ್ನಷ್ಟು ಕಡಿಮೆ ಆಗಬೇಕು.
ಶಾಂತಿ ಪಾಲನೆ ಉತ್ತಮವಾಗಿರಬೇಕು
ಕಾನೂನು-ಸುವ್ಯವಸ್ಥೆ, ಬಂಡವಾಳ ಹೂಡಿಕೆ, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಒಂದಕ್ಕೊಂದು ನೇರ ಸಂಬಂಧ ಹೊಂದಿದ್ದು, ಶಾಂತಿ ಪಾಲನೆ ಉತ್ತಮವಾಗಿರಬೇಕು.
ಕರ್ನಾಟಕ ಪೊಲೀಸ್ ಕೌಶಲ್ಯ ಮತ್ತು ವೃತ್ತಿಪರತೆಯನ್ನು ಜರ್ಮನಿ ಪ್ರಧಾನಿ ಹಾಗೂ ಪ್ರತಿನಿಧಿಗಳು ಶ್ಲಾಘಿಸಿರುವುದು ಹೆಮ್ಮೆಯ ವಿಷಯ.
ಬೇರೆಯವರಿಗೆ ಪ್ರೇರಣೆ
ಪದಕ ಪಡೆದವರು ಬೇರೆಯವರಿಗೆ ಪ್ರೇರಣೆ ಆಗಬೇಕು, ಮುಖ್ಯಮಂತ್ರಿ ಪದಕ ಪಡೆಯಲು ದಕ್ಷತೆ, ಪ್ರಾಮಾಣಿಕತೆಯಿಂದ ವೃತ್ತಿಪರತೆ ತೋರಿಸಬೇಕು.
ಪೊಲೀಸರ ಅಗತ್ಯ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸದಾ ಸಿದ್ಧವಿದೆ, ನಿರಂತರವಾಗಿ ನಿಮ್ಮ ಜೊತೆ ಇರುತ್ತೇವೆ, ಈ ಬಾರಿಯ ಬಜೆಟ್‌ನಲ್ಲಿ ಇಲಾಖೆ ಮತ್ತು ಸಿಬ್ಬಂದಿ ಅನುಕೂಲಕ್ಕೆ ಘೋಷಿಸಿರುವ ಎಲ್ಲ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುವುದು ಎಂದರು.