ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವತಿಯಿಂದ ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿರುವ ವರದಿಯನ್ನು ತಿರಸ್ಕರಿಸಿ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದೆ.
ಮುಡಾ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ 14 ನಿವೇಶನಗಳನ್ನು ಪಡೆದುಕೊಳ್ಳುವಲ್ಲಿ ಅನೇಕ ತಪ್ಪುಗಳನ್ನು ಎಸಗಿದ್ದಾರೆ, ಅದಕ್ಕೆ ಸಂಬಂಧಪಟ್ಟಂತೆ ನಮ್ಮ ಬಳಿ ದಾಖಲೆಗಳಿವೆ ಎಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇ.ಡಿ. ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.
ತಪ್ಪುಗಳು ಸಾಭೀತಾಗಿದೆ
ನಮ್ಮ ತನಿಖೆಯಿಂದ ತಪ್ಪುಗಳು ಸಾಭೀತಾಗಿದೆ, ಹೀಗಿದ್ದರೂ ಅವರು ತಪ್ಪು ಮಾಡಿಲ್ಲ ಎಂಬುದಾಗಿ ಲೋಕಾಯುಕ್ತ ’ಬಿ’ ರಿಪೋರ್ಟ್ ನೀಡಿರುವುದು ಸರಿಯಲ್ಲ.
ಹೀಗಾಗಿ ಲೋಕಾಯುಕ್ತ ವರದಿ ತಿರಸ್ಕರಿಸಿ ಮುಂದಿನ ವಿಚಾರಣೆಗೆ ಅವಕಾಶ ಮಾಡಿಕೊಡುವಂತೆ ಇ.ಡಿ. ಮನವಿ ಮಾಡಿದೆ.
ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಇ.ಡಿ. ಸಿದ್ಧಪಡಿಸಿದ್ದ ಎಂಟು ಪುಟಗಳ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಮುಖ್ಯಮಂತ್ರಿ ಕುಟುಂಬ
ಮುಡಾದಿಂದ ಕೋಟ್ಯಂತರ ರೂ. ಮೌಲ್ಯದ ಬಿಡಿ ನಿವೇಶನಗಳನ್ನು ಮುಖ್ಯಮಂತ್ರಿ ಅವರ ಕುಟುಂಬ ಪಡೆದುಕೊಂಡಿತ್ತು.
ಈ ಬಗ್ಗೆ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಾಜ್ಯಾಪಾಲರ ಮೊರೆ ಹೋಗಿದ್ದರು.
ಈ ಅರ್ಜಿಯನ್ನು ಎತ್ತಿಹಿಡಿದ ರಾಜಭವನ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿತ್ತು, ಇದನ್ನು ಪ್ರಶ್ನಿಸಿ, ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿದ್ದರು.
ತನಿಖೆಗೆ ಹೈಕೋರ್ಟ್ ಆದೇಶ
ರಾಜಭವನದ ನಿರ್ಧಾರವನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ತನಿಖೆಗೆ ಆದೇಶ ಮಾಡಿತ್ತು. ಇದರನ್ವಯ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು.
ನಿವೇಶನ ಹಂಚಿಕೆ ಪ್ರಕರಣದಲ್ಲಿ ಕೋಟ್ಯಂತರ ರೂ. ಕೈಬದಲಾವಣೆ ಆಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಇ.ಡಿ. ಮಧ್ಯಪ್ರವೇಶ ಮಾಡಿ ತನಿಖೆ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಲ್ಲದೆ, ಕೆಲವು ಅಧಿಕಾರಿಗಳ ಮನೆ ಮೇಲೆ ದಾಳಿಯನ್ನೂ ನಡೆಸಿತ್ತು.
ಪ್ರಮುಖ ಆರೋಪಿಗಳಾದ ಪಾರ್ವತಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರುಗಳಿಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿತ್ತು.
ನ್ಯಾಯಾಲಯದ ವಿನಾಯಿತಿ
ಇದನ್ನು ಪ್ರಶ್ನಿಸಿ ಆರೋಪಿಗಳು ನ್ಯಾಯಾಲಯದಿಂದ ವಿನಾಯಿತಿ ಪಡೆದಿದ್ದರು. ಇದರ ನಡುವೆ ಲೋಕಾಯುಕ್ತ ಪೋಲಿಸರು 14 ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಸೇರಿದಂತೆ ನಾಲ್ವರು ಪ್ರಮುಖ ಆರೋಪಿಗಳಿಗೂ ವರದಿಯಲ್ಲಿ ಕ್ಲೀನ್‌ಚಿಟ್ ನೀಡಲಾಗಿತ್ತು.
ಸಿಬಿಐ ತನಿಖೆಗೆ ಅರ್ಜಿ
ಇದನ್ನು ಪ್ರಶ್ನಿಸಿದ್ದ ಸ್ನೇಹಮಯಿ ಕೃಷ್ಣ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇವರ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಲೋಕಾಯುಕ್ತ ವರದಿಯನ್ನು ಎತ್ತಿಹಿಡಿದಿತ್ತು.
ಈಗ ಇ.ಡಿ. ಲೋಕಾಯುಕ್ತ ವರದಿಯನ್ನೇ ಪ್ರಶ್ನಿಸಿ, ತಕರಾರು ಅರ್ಜಿ ಸಲ್ಲಿಸಿರುವುದು ಮುಖ್ಯಮಂತ್ರಿ ಅವರು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.