ಹನಿಟ್ರ್ಯಾಪ್ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ
ಬೆಂಗಳೂರು: ಹನಿಟ್ರ್ಯಾಪ್ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆ ಸಂಚು ಹಿಂದಿನ ಕೈವಾಡದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರಿಗೆ ಪೂರ್ಣ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬಿಡಾರ ಹೂಡಿರುವ ಮುಖ್ಯಮಂತ್ರಿ ಇಂದು ಬೆಳಗ್ಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸುಮಾರು ೪೦ ನಿಮಿಷಗಳಿಗೂ ಹೆಚ್ಚು ಕಾಲ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಲ್ಲದೆ, ತಮ್ಮ ಆಪ್ತ ಸಚಿವರ ಬಳಗ ದೆಹಲಿಯಲ್ಲೇ ಇದ್ದರೂ ಯಾರನ್ನೂ ತಮ್ಮ ಜೊತೆ ಕರೆದುಕೊಳ್ಳದೆ, ತಾವು ಒಬ್ಬರೇ ಗೌಪ್ಯ ಮಾತುಕತೆ ನಡೆಸಿದ್ದಾರೆ.
ಚರ್ಚೆ ವೇಳೆ ಹನಿಟ್ರ್ಯಾಪ್ ವಿಚಾರ ಹೆಚ್ಚು ಪ್ರಸ್ತಾಪವಾಗಿ ರಾಹುಲ್ ಅವರು ಮಾಹಿತಿ ಪಡೆದರೆನ್ನಲಾಗಿದೆ.
ಸಚಿವ ರಾಜಣ್ಣ ವಿಧಾನಸಭೆಯಲ್ಲಿ ನೀಡಿದ ಹಠಾತ್ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ.
ಹನಿಟ್ರ್ಯಾಪ್ ಕರ್ನಾಟಕ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿರುವ ಅಂಶಗಳನ್ನು ರಾಹುಲ್ ಮುಂದಿಟ್ಟಿದ್ದಾರೆ.

ಉಪಮುಖ್ಯಮಂತ್ರಿ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನೂ ಹೊಂದಿರುವುದಕ್ಕೆ ಸರ್ಕಾರ ಮತ್ತು ಪಕ್ಷದ ವಲಯದಲ್ಲಿ ಅಪಸ್ವರ ಎದ್ದಿದೆ. ಈ ವಿಷಯ ಸಾರ್ವಜನಿಕವಾಗಿ ಚರ್ಚಿತವಾಗಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಶಿವಕುಮಾರ್ ಒಂದು ಹುದ್ದೆ ಹಾಗೂ ಒಂದು ಸಚಿವ ಖಾತೆಯಲ್ಲಿ ಮುಂದುವರೆಯಲಿ. ಇದರಿಂದ ಅವರು ತಮ್ಮ ಜವಾಬ್ದಾರಿಗೆ ಹೆಚ್ಚು ಸಮಯ ನೀಡಲು ಸಾಧ್ಯ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಶ್ವರ್ ಖಂಡ್ರೆ ಅವರನ್ನು ತರುವುದರಿಂದ ಸರ್ಕಾರ ಮತ್ತು ಪಕ್ಷದಲ್ಲಿ ಸಾಮರಸ್ಯ ಇರುತ್ತದೆ. ಗೊಂದಲ ಇರುವುದಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್‌ನ ತೆರವಾದ ನಾಲ್ಕು ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಪಟ್ಟಿಯನ್ನು ರಾಹುಲ್ ಮುಂದಿಟ್ಟಿದ್ದಾರೆ.
ಪಟ್ಟಿಯಲ್ಲಿ ಬಿ.ಎಲ್.ಶಂಕರ್ (ಒಕ್ಕಲಿಗ), ದಿನೇಶ್ ಅಮೀನ್ ಮಟ್ಟು (ಹಿಂದುಳಿದ), ಅಲ್ಲದೆ, ದಲಿತ ಮತ್ತು ಕೊರಚ ಸಮುದಾಯದ ತಲಾ ಒಬ್ಬರ ಹೆಸರು ಇದೆ ಎನ್ನಲಾಗಿದೆ. ಪಕ್ಷದ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್ ಮತ್ತು ಬಿ.ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತೆಯೂ ಕೋರಿದ್ದಾರೆ.
ರಾಜಕೀಯ ವಿಚಾರವಲ್ಲದೆ, ಆಡಳಿತಾತ್ಮಕವಾಗಿ ಕೆಲವು ವಿಷಯಗಳನ್ನು ರಾಹುಲ್ ಗಮನಕ್ಕೆ ತಂದಿರುವ ಮುಖ್ಯಮಂತ್ರಿ, ಕಾಂತರಾಜ್ ವರದಿ ಅನುಷ್ಟಾನಗೊಳಿಸಿ, ಒಟ್ಟಾರೆ ಶೇಕಡ ೭೩ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಇದಕ್ಕೆ ಅನುಮತಿ ನೀಡುವಂತೆ ಕೋರಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರ ಮಾತುಗಳನ್ನು ಆಲಿಸಿದ ರಾಹುಲ್ ಗಾಂಧಿ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ತಾವು ವೇಣುಗೋಪಾಲ್ ಜೊತೆ ಚರ್ಚಿಸುವುದಾಗಿ, ನೀವೂ ಸಹಾ ಅವರನ್ನು ಭೇಟಿ ಮಾಡಿ ಈ ವಿಷಯಗಳ ಬಗ್ಗೆ ಸಮಾಲೋಚಿಸುವಂತೆ ಸಲಹೆ ನೀಡಿದರೆನ್ನಲಾಗಿದೆ.
ರಾಹುಲ್ ಸಲಹೆ ನಂತರ ದೆಹಲಿ ಪ್ರವಾಸ ಮುಂದುವರೆಸಿರುವ ಮುಖ್ಯಮಂತ್ರಿ, ಶುಕ್ರವಾರ ರಾತ್ರಿ ನಗರಕ್ಕೆ ಹಿಂತಿರುಗಲಿದ್ದಾರೆ.