ಬೆಂಗಳೂರು:’ನಮ್ಮ ನೀರು ನಮ್ಮ ಹಕ್ಕು’ ಎಂದು ಹೇಳುತ್ತಾ ನಮ್ಮ ತೆರಿಗೆ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ ತಮಿಳುನಾಡಿಗೆ ನೀರು ಹರಿಸುತ್ತಾ ನಾವು ನೀರಗಂಟಿ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ನೀರಿನ ಹಂಚಿಕೆ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯ ಆಗಿದೆ, ಯಾವಾಗಲೂ ನಮ್ಮ ರಾಜ್ಯಕಿಂತ ನೆರೆ ರಾಜ್ಯಕ್ಕೆ ಅನುಕೂಲ ಆಗುತ್ತಿದೆ, ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ, ನೀರಿನ ವಿಷಯದಲ್ಲಿಯೂ ಇದೇ ಆಗುತ್ತಿದೆ ಎಂದರು.
ರಾಜಕೀಯ ಒಪ್ಪಂದ
ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ, ತಮಿಳುನಾಡಿನ ಡಿಎಂಕೆ ಸರ್ಕಾರದ ಜತೆ ನಮ್ಮ ಸಂಬಂಧ ರಾಜಕೀಯಕ್ಕೆ ಮಾತ್ರ ಸೀಮಿತ, ಮೇಕೆದಾಟು ವಿಷಯ ಮಾತನಾಡುವುದಕ್ಕೆ ರಾಜಕೀಯ ಒಪ್ಪಂದ ಮಾಡಿಕೊಂಡಿಲ್ಲ ಎಂಬುದಾಗಿ ಉಪಮುಖ್ಯಮಂತ್ರಿ ಹೇಳಿದ್ದಾರೆ, ಆದರೆ, ಕರ್ನಾಟಕದಲ್ಲಿ ಮೇಕೆದಾಟು ಪಾದಯಾತ್ರೆ ಮಾಡಿ ’ನಮ್ಮ ನೀರು ನಮ್ಮ ಹಕ್ಕು’ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆ ನೋಡಿದರೆ ಮುಂದಿನ ದಿನಗಳಲ್ಲಿ ನೀರಿನ ಸಂಕಷ್ಟ ಹೆಚ್ಚಲಿದೆ, ಅದಕ್ಕಾಗಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ನಾವು ಮುಂದಾಗಿದ್ದೇವೆ.
ಡಿ.ಕೆ.ಶಿವಕುಮಾರ್ ಮಿತ್ರ ಪಕ್ಷ ಆಡಳಿತ ನಡೆಸುತ್ತಿರುವ ತಮಿಳುನಾಡಿನ ಒಪ್ಪಿಗೆ ಕೊಡಿಸಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದರು.

ನಮ್ಮಲ್ಲಿ ಎಲ್ಲಕ್ಕೂ ರಾಜಕೀಯ
ಸಂಸತ್‌ನಲ್ಲಿ ಕಾವೇರಿ ವಿಷಯ ಪ್ರಸ್ತಾಪವಾದರೆ ತಮಿಳುನಾಡಿನ ಎಲ್ಲಾ ಸಂಸದರು ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಾಗುತ್ತಾರೆ, ಆದರೆ, ನಮ್ಮಲ್ಲಿ ಎಲ್ಲಕ್ಕೂ ರಾಜಕೀಯ ತರುತ್ತೇವೆ, ಜಾತಿ ತರುತ್ತೇವೆ, ಇದೇ ನಮಗೆ ಮುಳುವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೆಲ ಜಲ ಭಾಷೆ ವಿಷಯ ಬಂದಾಗ ರಾಜಕೀಯ, ಭಿನ್ನಾಭಿಪ್ರಾಯ ಎಲ್ಲವನ್ನೂ ಬದಿಗೊತ್ತಬೇಕು, ಇಲ್ಲವಾದರೆ ನಮ್ಮ ರಾಜ್ಯಕ್ಕೆ ನ್ಯಾಯ ಸಿಗುವುದಿಲ್ಲ.
93ರ ಇಳಿವಯಸ್ಸಿನಲ್ಲಿಯೂ ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸದನಕ್ಕೆ ವ್ಹೀಲ್‌ಚೇರ್‌ನಲ್ಲಿ ಬಂದು ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ಮರೆಯಬಾರದು.
ದೇವೇಗೌಡರ ಹೋರಾಟದ ಫಲ
ದೇವೇಗೌಡರ ಹೋರಾಟದ ಫಲವಾಗಿ ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳು ನಿರ್ಮಾಣವಾದವು.
ಕಾವೇರಿ ಕೊಳ್ಳಕ್ಕೆ ಮಾತ್ರವಲ್ಲ, ಕೃಷ್ಣ ಕೊಳ್ಳಕ್ಕೂ ನೀರು ಒದಗಿಸಲು ದೇವೇಗೌಡರು ಕೊಡುಗೆ ಕೊಟ್ಟರು, ಪ್ರಧಾನಿಯಾಗಿ ಉತ್ತರ ಕರ್ನಾಟಕದ ಭಾಗದ ಜನರಿಗೆ ಅಪಾರ ಸೇವೆ ಸಲ್ಲಿಸಿದರು, ಆದರೆ, ಕೆಲವರು ತುಂಡು ಗುತ್ತಿಗೆ ಎಂದು ಅಸತ್ಯ ಹಬ್ಬಿಸಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದರು ಎಂದರು.