ಬೆಂಗಳೂರು:ಮುಖ್ಯಮಂತ್ರಿ ಗಾದಿ ತಪ್ಪಿಸಲು ವರಿಷ್ಠರ ಮೇಲೆ ಸಿದ್ದರಾಮಯ್ಯ ಮತ್ತು ಬೆಂಬಲಿಗರ ಒತ್ತಡ ಹೆಚ್ಚಾಗುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೊರೆ ಹೋಗಿದ್ದಾರೆ.
ಕರ್ನಾಟಕದಲ್ಲಿ ಪಕ್ಷ ಅಧಿಕಾರ ವಹಿಸಿಕೊಳ್ಳುವ ವೇಳೆಯಲ್ಲಿ ಆಗಿರುವ ಒಪ್ಪಂದಂತೆ ಮೇ ತಿಂಗಳಿಗೆ ಎರಡು ವರ್ಷ ಪೂರ್ಣಗೊಳ್ಳಲಿದ್ದು, ತಮಗೆ ಮುಖ್ಯಮಂತ್ರಿ ಸ್ಥಾನ ದೊರಕಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಎಲ್ಲಾ ಆಯಾಮಗಳಿಂದ ಕಸರತ್ತು
ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸ್ಥಾನ ಪಡೆಯಲು ಎಲ್ಲಾ ಆಯಾಮಗಳಿಂದಲೂ ಕಸರತ್ತು ನಡೆಸಿದ್ದಾರೆ.
ಶಿವಕುಮಾರ್ ದೆಹಲಿಯಲ್ಲೇ ಇದ್ದರೂ ಸಿದ್ದರಾಮಯ್ಯ ಏಕಾಂಗಿಯಾಗಿ ರಾಹುಲ್ ಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮುಖಾಮುಖಿ ಚರ್ಚಿಸಿದ್ದಾರೆ.
ಆದರೆ, ಶಿವಕುಮಾರ್ ಈ ಬಾರಿ ಪಕ್ಷದ ಇತರೆ ಯಾವ ನಾಯಕರನ್ನೂ ಭೇಟಿಯಾಗದೆ, ಗೌಪ್ಯವಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತಮಗೆ ದಕ್ಕಬೇಕಿರುವ ಅಧಿಕಾರ ತಪ್ಪಿಸಲು ನಡೆಸಿರುವ ತಂತ್ರಗಾರಿಕೆಯನ್ನು ಮುಂದಿಟ್ಟಿದ್ದಾರೆ.
ಮಸಿ ಬಳಿಯುವ ಯತ್ನ
ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಆಪ್ತ ಸಚಿವರು ಮಾಡಿರುವ ತಂತ್ರಗಾರಿಕೆ, ಅವರು ನೀಡುತ್ತಿರುವ ಸಾರ್ವಜನಿಕ ಹೇಳಿಕೆಗಳಷ್ಟೇ ಅಲ್ಲದೆ, ಯಾವುದೋ ಹಳೆಯ ವಿಷಯಗಳನ್ನು ಮುಂದಿಟ್ಟಕೊಂಡು ತಮಗೆ ಮಸಿ ಬಳಿಯುವ ಯತ್ನವೂ ನಿರಂತರವಾಗಿ ನಡೆದಿದೆ.
ಆದರೆ, ನಾನು, ಈ ಯಾವುದೇ ವಿಷಯಗಳ ಕುರಿತು ಸಾರ್ವಜನಿಕವಾಗಿ ಪ್ರಸ್ತಾಪಿಸಿಲ್ಲ, ಸರ್ಕಾರ, ಪಕ್ಷದಲ್ಲಿನ ಚಟುವಟಿಕೆ ಮತ್ತು ತಮಗಾಗಿರುವ ನೋವುಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆ ಬಿಡಿಸಿಟ್ಟಿದ್ದೇನೆ.
ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಳ್ಳುವುದಕ್ಕೂ ಮುನ್ನ ಪಕ್ಷದ ಅಂಗಳದಲ್ಲಿ ನಡೆದಿರುವ ಮಾತುಕತೆಯಂತೆ ನನಗೂ ಒಂದು ಅವಕಾಶ ಕೊಡಿಸಿ ಎಂದು ಸೋನಿಯಾ ಅವರಲ್ಲಿ ವಿನಂತಿಸಿದ್ದಾರೆ.
ಪಕ್ಷಕ್ಕಾಗಿ ಜೈಲಿಗೂ ಹೋಗಿದ್ದೇನೆ
ಪಕ್ಷಕ್ಕೆ ಸಂಕಷ್ಟ ಎದುರಾದ ಎಲ್ಲಾ ಸಂದರ್ಭಗಳಲ್ಲಿ ಧೈರ್ಯವಾಗಿ ನಿಂತು ಕೆಲಸ ಮಾಡಿದ್ದೇನೆ, ಜೈಲಿಗೂ ಹೋಗಿದ್ದೇನೆ, ಇದೆಲ್ಲವೂ ನಿಮಗೆ ತಿಳಿದಿರುವ ವಿಚಾರವೇ ಆಗಿದೆ ಎಂದು ತಿಳಿಸಿದ್ದಾರೆ.
ಶಿವಕುಮಾರ್ ಮನವಿಯನ್ನು ಆಲಿಸಿದ ಸೋನಿಯಾ ಗಾಂಧಿ ಅವರು, ಈ ಬಗ್ಗೆ ನಾನು ಉಳಿದವರೊಂದಿಗೆ ಮಾತನಾಡುತ್ತೇನೆ, ನಿಮ್ಮ ಅವಕಾಶವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಎಂಬ ಭರವಸೆ ನೀಡಿದ್ದಾರಂತೆ.