ಬೆಂಗಳೂರು:ಸಿಐಡಿಯ ಡಿಜಿ ಸಲೀಂ ಅವರನ್ನು ರಾಜ್ಯ ಪೋಲಿಸ್ ಮಹಾನಿರ್ದೇಶಕರ ಹುದ್ದೆಗೆ ತರಲು ಸರ್ಕಾರ ಮುಂದಾಗಿದೆ.
ಈ ತಿಂಗಳಾಂತ್ಯಕ್ಕೆ ನಿವೃತ್ತಿ ಆಗಲಿರುವ ಡಿಜಿಪಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳಲ್ಲಿ ಪೈಪೋಟಿ ನಡೆದಿದೆ.
ಸೇವಾ ವಿಸ್ತರಣೆಗೆ ಮನವಿ
ಇದರ ಮಧ್ಯೆ ಅಲೋಕ್ ಮೋಹನ್ ತಮಗೆ ಮೂರು ತಿಂಗಳು ಸೇವಾ ವಿಸ್ತರಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಡಿಜಿ-ಐಜಿಪಿ ಹುದ್ದೆ ವಿಷಯದಲ್ಲಿ ಸರ್ಕಾರ ಇದುವರೆಗೂ ಸೇವಾ ವಿಸ್ತರಣೆ ಮಾಡಿದ ನಿದರ್ಶನಗಳಿಲ್ಲ, ಉನ್ನತ ಹುದ್ದೆ ಪಡೆಯಲು ಐವರು ಹಿರಿಯ ಪೋಲಿಸ್ ಅಧಿಕಾರಿಗಳ ನಡುವೆ ಪೈಪೋಟಿ ನಡೆದಿದೆ.
92ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಿಜಿ ಪ್ರಶಾಂತ್ ಕುಮಾರ್ ಠಾಕೂರ್ ಹಿರಿಯರು, ಅವರು ಅಧಿಕಾರ ಪಡೆಯಲು ದೆಹಲಿ ಮಟ್ಟದಲ್ಲಿ ಲಾಬಿ ನಡೆದಿದೆ.
ರನ್ಯಾ ರಾವ್ ಪ್ರಕರಣ
ಇವರ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇದ್ದಂತಿಲ್ಲ, 93ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಾ.ರಾಮಚಂದ್ರ ರಾವ್ ಬಗ್ಗೆ ಮೊದಲು ಒಲವಿತ್ತಾದರೂ, ಅವರು ರನ್ಯಾ ರಾವ್ ಪ್ರಕರಣದ ಹಿನ್ನೆಲೆಯಲ್ಲಿ ಕಡ್ಡಾಯ ರಜೆ ಮೇಲಿದ್ದಾರೆ.
ಇದರ ನಡುವೆ ಸಲೀಂ ಅವರನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕರೆಸಿಕೊಂಡು ಸಮಾಲೋಚನೆ ಮಾಡಿದ್ದಾರೆ.
ತಮಗೆ ಈ ಹುದ್ದೆಯ ಅವಕಾಶ ತಪ್ಪಿದರೆ ಮುಂದಿನ 20 ವರ್ಷಗಳವರೆಗೆ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರಿಗೆ ಬೆಂಗಳೂರು ಪೋಲಿಸ್ ಕಮೀಷನರ್ ಅಥವಾ ಪೋಲಿಸ್ ಮಹಾನಿರ್ದೇಶಕರ ಹುದ್ದೆ ಲಭಿಸದು.
ಅವಕಾಶ ಮಾಡಿಕೊಡಿ
ಆದ್ದರಿಂದ ತಮಗೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರಂತೆ, ಸಿಐಡಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆಂಬ ಭಾವನೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಲ್ಲಿದೆ, ಇವರಿಗೆ ಅವಕಾಶ ಮಾಡಿಕೊಡುವ ಮನಸ್ಸು ಇದ್ದಂತಿದೆ.
ಠಾಕೂರ್ ಅವರ ಹಿರಿತನವನ್ನು ಕಡೆಗಣಿಸಿ ಸಲೀಂ ಅವರಿಗೆ ಅವಕಾಶ ಮಾಡಿಕೊಡಬೇಕು, ಹಿಂದೆಲ್ಲಾ ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಪೋಲಿಸ್ ಮಹಾನಿರ್ದೇಶಕರ ಹುದ್ದೆಗೆ ಹಿರಿಯರನ್ನು ಕಡೆಗಣಿಸಿ, ಸರ್ಕಾರ ಮಧ್ಯಪ್ರವೇಶ ಮಾಡಿ ಕೆಳಗಿನವರಿಗೆ ಅಧಿಕಾರ ನೀಡಿದ ನಿದರ್ಶನಗಳಿವೆ.
ಸಲೀಂ ಜೊತೆಗೆ 93ನೇ ಬ್ಯಾಚ್‌ನಲ್ಲಿ ರಾಮಚಂದ್ರ ರಾವ್ ಅಲ್ಲದೆ, ಮಾಲಿನಿ ಕೃಷ್ಣಮೂರ್ತಿ, 94ನೇ ಬ್ಯಾಚ್‌ನ ಪ್ರಣಬ್ ಮೊಹಂತಿ ಇದ್ದಾರೆ.
ಪಟ್ಟಿಯಲ್ಲಿ ಐದು ಮಂದಿ
ಡಿಜಿ-ಐಜಿ ಆಯ್ಕೆ ಪಟ್ಟಿಯಲ್ಲಿ ಐದು ಮಂದಿ ಇದ್ದು, ಒಬ್ಬರ ಆಯ್ಕೆ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕಿದೆ.
ಸಲೀಂ ಅವರಿಗೆ ಸ್ಥಳೀಯರು ಎಂಬುದು ಮೊದಲ ಆದ್ಯತೆಯಾದರೆ, ಉಳಿದವರೆಲ್ಲರೂ ಹೊರ ರಾಜ್ಯದವರಾಗಿರುವುದರಿಂದ ಹೆಚ್ಚಿನ ಒಲವು ಇವರ ಕಡೆ ಇದ್ದಂತಿದೆ.