ಬೆಂಗಳೂರು:ಖನಿಜಯುಕ್ತ ಬಾಟಲ್ ನೀರು ಆರೋಗ್ಯಕ್ಕೆ ಮಾರಕ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಎಚ್ಚರಿಸಿದ್ದಾರೆ.
ಕೇಸರಿ ಮಿಶ್ರಿತ ತೊಗರಿಬೇಳೆ ಬಳಕೆ ಮಾಡಿದರೆ ಪಾರ್ಶ್ವವಾಯು, ಅಂಗವೈಕಲ್ಯ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಹಸಿರು ಬಟಾಣಿ ಬಗ್ಗೆಯೂ ಎಚ್ಚರ
ಹಾಗೆಯೇ ಹಸಿರು ಬಟಾಣಿ ಸೇವನೆಗೂ ಮುನ್ನ ಎಚ್ಚರ ವಹಿಸಿ, ಕೃತಕ ಬಣ್ಣ ಮಿಶಣ್ರದ ಬಟಾಣಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಇದನ್ನು ನಿಷೇಧಿಸಲಾಗುವುದು ಎಂದು ತಿಳಿಸಿದ್ದಾರೆ.
ಕೆಲವು ಕಂಪನಿಗಳ ಜೇನು ತುಪ್ಪದಲ್ಲೂ ರಾಸಾಯನಿಕ ಬಳಕೆಯಾಗುತ್ತಿದೆ, ಪೇಪರ್ ಲೋಟ ಬಳಕೆಯಿಂದಲೂ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ, ಈ ಲೋಟಗಳಲ್ಲಿ ಬಿಸಿಯಾದ ಕಾಫಿ, ನೀರು ಕುಡಿದರೆ ಪ್ಲ್ಯಾಸ್ಟಿಕ್ ಕರಗಿ ಮನುಷ್ಯನ ದೇಹದಲ್ಲಿ ಸೇರಿ ಕ್ಯಾನ್ಸರ್‌ಗೆ ಎಡೆ ಮಾಡಿಕೊಡುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆಹಾರ ಇಲಾಖೆ ಈ ಎಲ್ಲಾ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಬಾಟಲ್‌ನಲ್ಲಿ ಖನಿಜಯುಕ್ತ ಕುಡಿಯುವ ನೀರು ಸುಕ್ಷಿತವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ ಎಂದರು.
ಬಾಟಲ್ ನೀರು ಅಸುರಕ್ಷಿತ
ರಾಷ್ಟ್ರ ಮತ್ತು ರಾಜ್ಯದ 296 ಕಂಪನಿಗಳ ಬಾಟಲಿ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೇವಲ 72 ಬಾಟಲ್ ನೀರು ಸುರಕ್ಷಿತ ಮತ್ತು ಉಳಿದವು ಅಸುರಕ್ಷಿತ ಎಂಬ ಫಲಿತಾಂಶ ವ್ಯಕ್ತವಾಗಿದೆ.
ಸುರಕ್ಷಿತವಲ್ಲದ ಬಾಟಲ್ ನೀರಿನಲ್ಲಿ ಕೆಮಿಕಲ್ ಹಾಗೂ ಬ್ಯಾಕ್ಟೀರಿಯಾ ಕಂಡಬಂದಿದೆ, ಇಂತಹ ಕಂಪನಿಗಳ ಲೀಗಲ್ ಮಾದರಿ ಸಂಗ್ರಹಿಸಿ ಅಂತಹ ಕಂಪನಿಗಳಿಗೆ ಬೀಗಮುದ್ರೆ ಹಾಕಲಾಗುವುದು.
ಸ್ಥಳೀಯ ಕಂಪನಿಗಳ ನೀರು ಕುಡಿಯಲು ತೀರಾ ಅನರ್ಹವಾಗಿರುವುದು ಕಂಡಿಬಂದಿದೆ, ರಾಷ್ಟ್ರಮಟ್ಟದ ಕೆಲವು ಕಂಪನಿಗಳ ನೀರೂ ಸುಕ್ಷಿತವಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ಈ ಕಂಪನಿಗಳು ಯಾವುವು ಎಂಬುದನ್ನು ಬಹಿರಂಗ ಪಡಿಸಲಾಗುವುದು ಎಂದರು.
ನಕಲಿ ಕಂಪನಿಗಳ ವಿರುದ್ಧ ಸಮರ
ಬಾಟಲ್ ನೀರಿನಲ್ಲಿ ಮಿನರಲ್ ಸಹಾ ಇರುವುದಿಲ್ಲ, ಇನ್ನು ಮುಂದೆ ನಕಲಿ ವಾಟರ್ ಬಾಟಲ್ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಇಲಾಖೆ ಸಮರ ಸಾರಲಿದೆ.
ಸಿಹಿ ತಿಂಡಿಗೆ ಬಳಸುವ ಖೋವಾದಲ್ಲೂ ಕಲಬೆರಕೆ ಪತ್ತೆಯಾಗಿದ್ದು, ಇದೂ ಸಹಾ ಆರೋಗ್ಯಕ್ಕೆ ಮಾರಕ.
ಇನ್ನು ತೊಗರಿಬೇಳೆಯಲ್ಲಿ ಕೇಸರಿ ಬಣ್ಣ ಮಿಶ್ರಣ ಪತ್ತೆಯಾಗಿದೆ, ಇದು ವಿಷಕಾರಿ, ಇದರ ಸೇವನೆಯಿಂದ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶದಲ್ಲಿ ಇಂತಹ ಬೇಳೆ ಬೆಳೆಯಲಾಗುತ್ತಿದ್ದು, ನಿರಂತರ ಸೇವನೆಯಿಂದ ಶಾಶ್ವತ ಅಂಗವೈಕಲ್ಯ ಉಂಟಾಗುತ್ತದೆ ಎಂದು ಎಚ್ಚರಿಸಿದ್ದಾರೆ.
