ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ
ಬೆಂಗಳೂರು:ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 8 ಗಣಿ ಗುತ್ತಿಗೆಗಳನ್ನು ಹರಾಜು ಮಾಡುವ ಬದಲು, ಗುತ್ತಿಗೆ ನವೀಕರಿಸಿ 500 ಕೋಟಿ ರೂ. ಕಿಕ್ಬ್ಯಾಕ್ ಪಡೆದು ಸರ್ಕಾರಕ್ಕೆ 5000 ಕೋಟಿ ರೂ. ನಷ್ಟ ಉಂಟು ಮಾಡಿದ್ದು ಈ ಬಗ್ಗೆ ವಿಚಾರಣೆಗೆ ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬುವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಇವರ ದೂರಿನ ಆಧಾರದ ಮೇಲೆ ರಾಜಭವನ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮಕ್ಕಾಗಿ ಸಾಲಿಸಿಟರ್ ಜನರಲ್ ಅವರ ಅಭಿಪ್ರಾಯ ಕೇಳಿದೆ.
ಗಣಿ ಗುತ್ತಿಗೆ ನವೀಕರಣ
ರಾಮಗಡ್, ತುಮಕೂರು ಮಿನರಲ್ಸ್, ಕರ್ನಾಟಕ ಲಿಮ್ಕೊ, ಕಾರಿಗನೂರು ಮಿನರಲ್ಸ್ ಸೇರಿದಂತೆ 8 ಕಂಪನಿಗಳಿಗೆ ಗುತ್ತಿಗೆ ನವೀಕರಿಸಿ ಸರ್ಕಾರಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೋಟ್ಯಂತರ ರೂ. ನಷ್ಟ ಉಂಟು ಮಾಡಿದ್ದಾರೆ.
ಈ ಕಂಪನಿಗಳ ಗುತ್ತಿಗೆ ನವೀಕರಿಸಿದ ನಂತರ ಸಿದ್ದರಾಮಯ್ಯ ಕುಟುಂಬದ ಆಸ್ತಿ ಅದರ ಹಿಂದಿನ ವರ್ಷಕ್ಕಿಂತ ಗಣನೀಯವಾಗಿ ಹೆಚ್ಚಳವಾಗಿದೆ.
ಇದರ ಮಾಹಿತಿಯನ್ನು ಮತ್ತು ದಾಖಲೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಲು ಸಮಯಾಕಾಶ ಕೋರಿ ರಾಮಮೂರ್ತಿ ಗೌಡ ರಾಜಭವನಕ್ಕೆ ಮನವಿ ಮಾಡಿದ್ದರು.
ದಾಖಲೆಗಳ ಪರಿಶೀಲನೆ
ಇವರ ಕೋರಿಕೆ ಪರಿಗಣಿಸಿದ ರಾಜ್ಯಪಾಲರು ಏಪ್ರಿಲ್ 1 ರಂದು ದೂರುದಾರರನ್ನು ಕರೆಸಿಕೊಂಡು ಮಾಹಿತಿ ಮತ್ತು ದಾಖಲೆಗಳನ್ನು ಅಧಿಕಾರಿಗಳ ಜೊತೆಗೂಡಿ ಪರಿಶೀಲಿಸಿದರು.
ತದನಂತರ ಈ ಎಲ್ಲಾ ದಾಖಲೆಗಳನ್ನು ಕೇಂದ್ರದ ಸಾಲಿಸಿಟರ್ ಜನರಲ್ ಅವರಿಗೆ ಕಳುಹಿಸಿ ಅಭಿಪ್ರಾಯ ಕೇಳಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ರಾಜಭವನ ಸರ್ಕಾರಕ್ಕೆ ಪತ್ರವೂ ಬರೆದಿಲ್ಲ, ಮಾಹಿತಿಯನ್ನೂ ಕೋರಿಲ್ಲ.

ಪತ್ರ ಬರೆದು ವಿವರಣೆ
ಈ ಹಿಂದೆಲ್ಲಾ ದೂರುಗಳು ಬಂದಾಗ ಸರ್ಕಾರದ ಮುಖ್ಯಕಾರ್ಯದರ್ಶಿ ಅಥವಾ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ವಿವರಣೆ ಕೋರುತ್ತಿದ್ದರು.
ರಾಜಭವನದಿಂದ ಬರುವ ಇಂತಹ ಪತ್ರಗಳಿಗೆ ಅಧಿಕಾರಿಗಳು ಉತ್ತರ ನೀಡಬಾರದೆಂದು, ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡ ಸಿದ್ದರಾಮಯ್ಯ ಸರ್ಕಾರ, ಆ ಪತ್ರಗಳಿಗೆ ಸಂಪುಟವೇ ಉತ್ತರಿಸಬೇಕು ಎಂದಿತ್ತು.
ಬೆಳವಣಿಗೆ ನಂತರ ರಾಜ್ಯಪಾಲರು ರೀ-ಡೂ ಸೇರಿದಂತೆ 26 ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ಕೋರಿ ಸರ್ಕಾರದಿಂದ ಉತ್ತರ ಬಾರದ ಕಾರಣ ಈ ಬಾರಿ ನೇರವಾಗಿ ಸಾಲಿಸಿಟರ್ ಅಭಿಪ್ರಾಯಕ್ಕೆ ಮುಂದಾಗಿದ್ದಾರೆ.
ಪ್ರಾಸಿಕ್ಯೂಷನ್ಗೆ ಅನುಮತಿ
ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ವಿಧಿ 7, 9, 11, 12 ಮತ್ತು 15ರಡಿ ಪ್ರಾಸಿಕ್ಯೂಷನ್ಗೆ ಅನುಮತಿಗೆ ಕೋರಲಾಗಿದೆ.
ಅಲ್ಲದೆ, ಭಾರತೀಯ ನ್ಯಾಯ ಸಂಹಿತೆ ವಿಧಿ 59, 61, 42, 201, 227, 228, 229, 239, 314, 316 (5) 318 (1), 319, 322, 324 (2), 324 (3), 335, 336, 338, 340ರ ಅನ್ವಯ ಪೂರ್ವಾನುಮತಿ ನೀಡುವಂತೆಯೂ ಕೋರಿದ್ದಾರೆ.
ಗಣಿ ಗುತ್ತಿಗೆ ನವೀಕರಣಕ್ಕೂ ಮುನ್ನ ಸಿದ್ದರಾಮಯ್ಯ ಆದಾಯದಲ್ಲಿ ಏರಿಕೆ ಆಗಿರಲಿಲ್ಲ, ನಂತರದ ವರ್ಷಗಳಲ್ಲಿ ಅವರ ಆದಾಯದಲ್ಲಿ ಗಣನೀಯ ಏರಿಕೆ ಆಗಿದೆ, ಅವರೂ ಮತ್ತು ಅವರ ಕುಟುಂಬ ಸದಸ್ಯರ ಸ್ಥಿರ ಮತ್ತು ಚರಾಸ್ತಿಗಳಲ್ಲೂ ಏರಿಕೆಯಾಗಿವೆ, ಇವುಗಳ ಮೊತ್ತ ಹಲವು ಕೋಟಿ ರೂ.ಗಳಾಗಿವೆ ಎಂದು ದಾಖಲೆಗಳನ್ನು ನೀಡಿದ್ದಾರೆ.
ಹರಾಜು ಪ್ರಕ್ರಿಯೆ
ಹರಾಜು ಪ್ರಕ್ರಿಯೆ ಮುಂದುವರೆಸಿದ್ದರೆ ಪ್ರತಿ ಗಣಿ ಗುತ್ತಿಗೆಯಿಂದ 500 ಕೋಟಿ ರೂ. ಆದಾಯ ಸರ್ಕಾರಕ್ಕೆ ಬರುತ್ತಿತ್ತು.
ಸುಮಾರು 4,000 ಕೋಟಿ ರೂ. ನೇರವಾಗಿ ಆದಾಯ ತಪ್ಪಿರುವುದಲ್ಲದೆ, ವಿವಿಧ ತೆರಿಗೆಗಳಿಂದ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ದೂರಿದ್ದಾರೆ.
ಎಂಟು ಗಣಿ ಕಂಪನಿಗಳ ಗುತ್ತಿಗೆ ನವೀಕರಣ ಅರ್ಜಿಗಳು 10 ವರ್ಷದಿಂದಲೂ ಸಂಬಂಧಪಟ್ಟ ಪ್ರಾಧಿಕಾರದ ಮುಂದೆಯೇ ಇದ್ದವು, ಅಕ್ರಮ ಗಣಿಗಾರಿಕೆ ನಡೆಸಿದ್ದ ಕಾರಣಕ್ಕೆ ಗಣಿ ಗುತ್ತಿಗೆ ನವೀಕರಣದ ಅರ್ಜಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಇತ್ಯರ್ಥ ಮಾಡದೆ ಬಾಕಿ ಉಳಿಸಿಕೊಂಡಿದ್ದವು.
