ಬೆಂಗಳೂರು:ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ವರದಿ-2024 ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅಧಿಕಾರಾವಧಿ ವೇಳೆ ನಡೆಸಿದ ಸಮೀಕ್ಷೆಯ ವರದಿಯನ್ನು ಸಾರ್ವಜನಿಕಗೊಳಿಸುವ ಸಮಯ ಬಂದಿದೆ.
ಅಂಕಿ-ಅಂಶ ಬಹಿರಂಗ ಉದ್ದೇಶ
ಸಿದ್ದರಾಮಯ್ಯ ಅವರಿಗೆ ವರದಿ ಅನುಷ್ಟಾಗೊಳ್ಳುವುದೋ, ಇಲ್ಲವೋ ತಿಳಿಯದು, ಆದರೆ, ಅಂಕಿ-ಅಂಶಗಳು ಬಹಿರಂಗವಾಗಬೇಕೆಂಬುದು ಅವರ ಇಚ್ಛೆ.
ಆದರೆ, ನಾಳೆ ನಡೆಯುವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ದಾಖಲೆಗಳನ್ನು ಬಹಿರಂಗ ಮಾಡದೆ ಮುಂದೂಡುವ ಬಗ್ಗೆಯೂ ಚರ್ಚೆಗಳು ನಡೆದಿದೆ.
ವರದಿ ಮಂಡನೆಗೆ ಸಿದ್ದರಾಮಯ್ಯ ರಾಹುಲ್ ಗಾಂಧಿ ಅನುಮತಿ ಪಡೆದುಕೊಂಡಿದ್ದಾರೆ, ಆದರೆ, ಸ್ಥಳೀಯವಾಗಿ ಲಿಂಗಾಯತ, ಒಕ್ಕಲಿಗ ಹಾಗೂ ಮುಂದುವರೆದ ಸಮಾಜದ ಸಚಿವರುಗಳೇ ಬಹಿರಂಗವಾಗಿ ವಿರೋಧಿಸಿದ್ದಾರೆ.
ಸಮುದಾಯಗಳ ವಿರೋಧ
ಸಮೀಕ್ಷಾ ವರದಿ ಅಂಕಿ-ಅಂಶಗಳು ಅಧಿಕೃತವಾಗಿ ಬಹಿರಂಗವಾಗುವ ಮುನ್ನವೇ ಈ ಸಮುದಾಯಗಳು ಸಾರ್ವಜನಿಕವಾಗಿ ವಿರೋಧ ವ್ಯಕ್ತಪಡಿಸಿವೆ.
ಇಷ್ಟರ ನಡುವೆಯೂ ಮುಖ್ಯಮಂತ್ರಿ ಅವರು, ಎರಡನೇ ಬಾರಿಗೆ ವಿಷಯವನ್ನು ಸಂಪುಟದ ಮುಂದೆ ತರುತ್ತಿದ್ದಾರೆ.
ಈ ಬಾರಿಯೂ ಮುಂದೂಡಲ್ಪಡುವುದೋ ಅಥವಾ ಅಂಕಿ-ಅಂಶಗಳು ಬಹಿರಂಗಗೊಳ್ಳುತ್ತವೆಯೇ ಎಂಬ ಕುತೂಹಲ ಮೂಡಿದೆ.
ಕಾನೂನು-ಸುವ್ಯವಸ್ಥೆ ಮೇಲೆ ಪರಿಣಾಮ
ವರದಿ ಬಹಿರಂಗಗೊಳ್ಳುತ್ತಿದ್ದಂತೆ ಕಾನೂನು-ಸುವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಬಹುದೆಂಬ ಭಯವೂ ಸರ್ಕಾರಕ್ಕಿದೆ.
ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಅವರು ವಿಷಯವನ್ನು ಸಭೆ ಮುಂದೆ ತರುತ್ತಿದ್ದಾರೆ.
ಅವರ ಮುಂದೆ, ವಿಷಯವನ್ನು ಮತ್ತೆ ಮುಂದೂಡುವುದೋ, ಇಲ್ಲವೇ ಸಂಪುಟದಲ್ಲಿ ದಾಖಲೆ ಬಿಡುಗಡೆ ಮಾಡದೆ, ತುರ್ತು ವಿಧಾನಮಂಡಲ ಅಧಿವೇಶನ ಕರೆದು ಚರ್ಚೆ ನಡೆಸುವುದು.
ಮುಖ್ಯಮಂತ್ರಿ ಹಲವು ಚಿಂತನೆ
ಇದಲ್ಲದೆ, ಸಂಪುಟ ಉಪಸಮಿತಿ ರಚನೆ ಮಾಡುವುದೇ ಅಥವಾ ಸಚಿವರನ್ನು ಒಳಗೊಂಡ ವಿವಿಧ ಸಮುದಾಯಗಳ ತಜ್ಞರ ಸಮಿತಿ ರಚಿಸುವ ಬಗ್ಗೆಯೂ ಮುಖ್ಯಮಂತ್ರಿ ಆಲೋಚನೆ ಹೊಂದಿದ್ದಾರೆ.
ಮೊದಲ ಬಾರಿಗೆ ಸಂಪುಟದಲ್ಲಿ ವಿಷಯ ಪ್ರಸ್ತಾಪವಾದ ತಕ್ಷಣವೇ ಪಕ್ಷದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು.
ಇತ್ತೀಚೆಗೆ ಸಿದ್ದರಾಮಯ್ಯ ದೆಹಲಿ ಪ್ರವಾಸ ವೇಳೆ ರಾಹುಲ್ ಗಾಂಧಿ ಅವರನ್ನು ಏಕಾಂಗಿಯಾಗಿ ಭೇಟಿ ಮಾಡಿ ವರದಿ ಮಂಡನೆಗೆ ಅನುಮತಿ ಪಡೆದುಕೊಂಡಿದ್ದಾರೆ.
ಹೈಕಮಾಂಡ್ ಅನುಮತಿ
ಅಷ್ಟೇ ಅಲ್ಲ, ಗುಜರಾತ್‌ನಲ್ಲಿ ನಡೆದ ಎರಡು ದಿನಗಳ ಎಐಸಿಸಿ ಅಧಿವೇಶನ ಸಂದರ್ಭದಲ್ಲೂ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಚರ್ಚೆ ಮಾಡಿದ್ದಾರೆ.
ಈ ಬೆಳವಣಿಗೆ ನಂತರವೇ ಸಿದ್ದರಾಮಯ್ಯ ಮಂತ್ರಿಮಂಡಲ ಸಭೆಯ ವಿಷಯ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ.
ಶುಕ್ರವಾರ ನಡೆಯುವ ಮಂತ್ರಿಮಂಡಲ ಸಭೆ ಇದರ ಬಗ್ಗೆ ಏನೇ ತೀರ್ಮಾನ ಕೈಗೊಂಡರೂ ಅದು ರಾಜಕೀಯ ಸ್ವರೂಪ ಪಡೆಯಲಿದೆ.
