ಬೆಂಗಳೂರು:ಕಾಂಗ್ರೆಸ್ ಹಲವು ವರ್ಷಗಳಿಂದ ದಲಿತರನ್ನು ತುಳಿದುಕೊಂಡೇ ಬಂದಿದೆ ಎಂದು ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.
“ಭೀಮ ಹೆಜ್ಜೆ 100ರ ಸಂಭ್ರಮ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತರ ಬಗ್ಗೆ ಮಾತಾಡುವಾಗ ತುಳಿತಕ್ಕೆ ಒಳಗಾದವರು ಎನ್ನುತ್ತೇವೆ, ಆದರೆ, ತುಳಿದವರು ಯಾರು ಎಂಬುದಾಗಿ ಪ್ರಶ್ನಿಸಿದರೆ, ಕಾಂಗ್ರೆಸ್ ಎಂಬ ಉತ್ತರ ಸಿಗುತ್ತದೆ. ಶೋಷಿತರನ್ನು ಇಷ್ಟು ವರ್ಷ ಕಾಂಗ್ರೆಸ್‌ನವರೇ ತುಳಿದಿದ್ದಾರೆ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್ ಕಳ್ಳರು ದಲಿತರ ಉದ್ಧಾರ ಮಾಡಲಿಲ್ಲ ಎಂದರು.

ಪಂಚತೀರ್ಥ ಯಾತ್ರಾ ಸ್ಥಳ
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಡಾ.ಅಂಬೇಡ್ಕರ್ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂಬ ಹೆಸರಿನಲ್ಲಿ ಯಾತ್ರಾ ಸ್ಥಳವಾಗಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ತಾವು ದಲಿತರ ಪರ ಎನ್ನುತ್ತಾರೆ, ಆದರೆ, ದಲಿತರಿಗೆ ಮೋಸ ಮಾಡುತ್ತಾರೆ.
ವಕ್ಫ್ ಮಂಡಳಿ ಲಕ್ಷಾಂತರ ದಲಿತರ ಆಸ್ತಿ ಲೂಟಿ ಮಾಡಿದೆ, ವಕ್ಫ್‌ನ ಭೂ ಕಬಳಿಕೆ ಬಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆಗೆ ತೆರಳಿದ್ದಾಗ ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು.
ವಕ್ಫ್ ತಿದ್ದುಪಡಿಗೆ ಕಾಂಗ್ರೆಸ್ ವಿರೋಧ
ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸಿರುವುದು ದಲಿತರ ಬಗೆಗಿನ ಆ ಪಕ್ಷದ ಕಾಳಜಿ ಏನೆಂಬುದು ಅರ್ಥವಾಗುತ್ತದೆ, ಸಂವಿಧಾನ ಉಳಿಯಬೇಕು, ಕಾಂಗ್ರೆಸ್‌ನ ಪೊಳ್ಳು ಭರವಸೆಗಳು ಹೋಗಬೇಕು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಸಮೀಕ್ಷೆ ಮಾಡಿದವರು ಎಲ್ಲರ ಮನೆಗೆ ಹೋಗಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಮಾಡಿಸಿರುವ ವರದಿ ಇದು, ಇದರಲ್ಲಿ ರಾಜಕೀಯ ಇರುವುದರಿಂದ ಯಾರೂ ಒಪ್ಪಲ್ಲ, ಯಾರಿಗೋ ಅನುಕೂಲ ಮಾಡಿಕೊಡಲು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಈ ವರದಿ ರೂಪಿಸಲಾಗಿದೆ, ಕಾಂಗ್ರೆಸ್ ಉದ್ದೇಶವೂ ಇದೇ ಆಗಿದೆ ಎಂದರು.
ಗುತ್ತಿಗೆದಾರರ ಕಮಿಷನ್ ಆರೋಪ ಕುರಿತು ಕಾಂಗ್ರೆಸ್ ನಾಯಕರು ಚರ್ಚಿಸಲಿ, ಯಾವ ಖಾತೆಗಳಲ್ಲಿ ಎಷ್ಟು ಲೂಟಿ ನಡೆಯುತ್ತಿದೆ, ಕಮಿಷನ್ ಕೊಡುವವರಿಗೆ ಬಿಲ್ ಪಾವತಿಯಾಗುತ್ತದೆ, ಅಬಕಾರಿ ಇಲಾಖೆ ಸಚಿವರ ಮಗ ಲೂಟಿ ಮಾಡುತ್ತಿದ್ದಾರೆ, ಸಚಿವರ ಮೇಲೆ ಇಷ್ಟೆಲ್ಲ ಆರೋಪ ಬಂದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಳ್ಳುತ್ತಾರೆ.
ಭ್ರಷ್ಟಾಚಾರವೇ ಬಂಧು-ಬಳಗ
ಭ್ರಷ್ಟಾಚಾರವೇ ನಮ್ಮ ಬಂಧು-ಬಳಗ ಎಂಬುದಾಗಿ ಕಾಂಗ್ರೆಸ್ ಘೋಷಣೆ ಮಾಡಿಕೊಳ್ಳಲಿ, ಸಿದ್ದರಾಮಯ್ಯ ರಾಜೀನಾಮೆ ನೀಡದಿರಲು ಕಮಿಷನ್ ವಸೂಲಿ ಮಾಡಿದರೆ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಕಮಿಷನ್ ಸಂಗ್ರಹಿಸುತ್ತಿದ್ದಾರೆ.
ಸಚಿವರು ಮುಖ್ಯಮಂತ್ರಿಯಾಗಲು ಕಮಿಷನ್ ಪಡೆಯುತ್ತಿದ್ದಾರೆ, ವಿಧಾನಸೌಧದಲ್ಲಿನ ಸಚಿವರ ಕಚೇರಿಗಳು ಕಲೆಕ್ಷನ್ ಸೆಂಟರ್‌ಗಳಾಗಿವೆ, ಇದಲ್ಲದೆ, ಜನರ ಮೇಲೆ 80 ಸಾವಿರ ಕೋಟಿ ರೂ. ತೆರಿಗೆ ಹಾಕಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಹೋರಾಟಕ್ಕೆ ಬಿಜೆಪಿಯ ಸಂಪೂರ್ಣ ಬೆಂಬಲವಿದೆ, ಯಾವ ಹೋರಾಟ ಒಟ್ಟಿಗೆ ಮಾಡಬೇಕು, ಪ್ರತ್ಯೇಕ ಮಾಡಬೇಕೆಂದು ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಲಾಗುವುದು, ಎರಡು ಪಕ್ಷಗಳ ನಡುವಿನ ಬಾಂಧವ್ಯಕ್ಕೆ ಯಾರಿಂದಲೂ ಹುಳಿ ಹಿಂಡಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಹಿಂದೂ ವಿರೋಧಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ, ದಲಿತ ವಿರೋಧಿಯೂ ಹೌದು, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ್ದರು.
ದಲಿತರ ಮೀಸಲಾತಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ವಿರೋಧಿಸಿದ್ದನ್ನು ಜನರ ಮುಂದೆ ತೆರೆದಿಡುತ್ತೇವೆ, ಈಗಲೂ ಖರ್ಗೆಯವರಿಗೆ ಅವಮಾನ ಮಾಡಿದ್ದನ್ನೂ ತಿಳಿಸುತ್ತೇವೆ ಎಂದರು.
ಖರ್ಗೆ ನಾಮಕಾವಾಸ್ತೆ ಅಧ್ಯಕ್ಷರು
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಎಐಸಿಸಿಯ ನಾಮಕಾವಾಸ್ತೆ ಅಧ್ಯಕ್ಷರು, ಆರು ವರ್ಷ ಆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಡಾ.ಪರಮೇಶ್ವರ್ ಅವರಿಗೇ ನ್ಯಾಯ ಕೊಟ್ಟಿಲ್ಲ, ಕಾಂಗ್ರೆಸ್‌ಗೆ ದಲಿತರ, ಅಸ್ಪೃಶ್ಯರ ಮತ ಬೇಕು, ಆದರೆ, ಅವರನ್ನು ಲೆಕ್ಕಕ್ಕೆ ಪರಿಗಣಿಸುವುದಿಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರಾ ಮಾತ್ರ ಲೆಕ್ಕಕ್ಕೆ ಇರುವ ನಾಯಕರು, ಮಲ್ಲಿಕಾರ್ಜುನ ಖರ್ಗೆ ನಾಮಕಾವಾಸ್ತೆ ಅಧ್ಯಕ್ಷರಾದರೆ, ರಾಹುಲ್ ಗಾಂಧಿ ಸೂಪರ್ ಪವರ್ ನಾಯಕ ಎಂದು ಟೀಕಿಸಿದರು.
