ಬೆಂಗಳೂರು:ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮತ್ತು ದತ್ತಾಂಶಗಳ ವರದಿಯನ್ನು ಸಚಿವ ಸಂಪುಟ ಇಂದಿಲ್ಲಿ ಅಂಗೀಕರಿಸಿದೆ.
ಅಂಗೀಕಾರಗೊಂಡ ವರದಿ ಅನುಷ್ಟಾನ ಸಂಬಂಧದ ಆಗು-ಹೋಗುಗಳ ಬಗ್ಗೆ ಚರ್ಚಿಸಲು ಏಪ್ರಿಲ್ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಸಿದ್ಧಗೊಂಡು 2024ರಲ್ಲಿ ಪರಿಷ್ಕರಣೆಗೊಂಡ ವರದಿಯನ್ನು ಅಂಗೀಕರಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ರಾಜಕೀಯ ಚಾಣಕ್ಯತನ
ವರದಿಗೆ ಅಡ್ಡಿ, ಆತಂಕ, ವಿರೋಧ ಎದುರಾದರೂ ಲೆಕ್ಕಿಸದೆ, ದತ್ತಾಂಶವನ್ನು ಅಂಗೀಕರಿಸುವಲ್ಲಿ ಸಿದ್ದರಾಮಯ್ಯ ರಾಜಕೀಯ ಚಾಣಕ್ಯತನ ತೋರಿದ್ದಾರೆ.
ಸಮೀಕ್ಷಾ ವರದಿ ಲಕೋಟೆ ಬಿಚ್ಚಿದ ನಂತರ ಸಚಿವರುಗಳು ತಮ್ಮದೇ ಆದ ಅಭಿಪ್ರಾಯಗಳನ್ನು ಸಭೆಯ ಮುಂದಿಟ್ಟರು.
ಇದೆಲ್ಲವನ್ನೂ ಆಲಿಸಿದ ಮುಖ್ಯಮಂತ್ರಿ ಅವರು, ವರದಿ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆಯೋಣ, ಅಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ, ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ಅಂಕಿ-ಅಂಶಗಳು ಅಧಿಕೃತವಲ್ಲ, ಮುಖ್ಯಕಾರ್ಯದರ್ಶಿಗಳು ನೀಡುವ ಟಿಪ್ಪಣಿ ಮತ್ತು ವರದಿಯನ್ನು ಅಧ್ಯಯನ ಮಾಡಿ ಮುಂದಿನ ಸಭೆಗೆ ಬನ್ನಿ ಎಂದಿದ್ದಾರೆ.
ಮುಖ್ಯಕಾರ್ಯದರ್ಶಿಗೆ ಆದೇಶ
ದತ್ತಾಂಶಗಳ ಬಗ್ಗೆ ಅಧಿಕೃತವಾಗಿ ಸರ್ಕಾರ ಮಾಹಿತಿ ನೀಡಿಲ್ಲ, ಆದರೆ, ಸಂಪುಟದ ಎಲ್ಲಾ ಸಹೋದ್ಯೋಗಿಗಳು ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ವರದಿಯ ಪ್ರತಿ ತಲುಪಿಸುವಂತೆ ಮುಖ್ಯಕಾರ್ಯದರ್ಶಿ ಅವರಿಗೆ ಸಭೆಯಲ್ಲೇ ಮುಖ್ಯಮಂತ್ರಿ ಆದೇಶ ಮಾಡಿದರು.
ಮುಂದಿನ ಗುರುವಾರ ನಡೆಯಲಿರುವ ಸಂಪುಟ ಸಭೆ ವೇಳೆಗೆ ಸಚಿವರುಗಳು ಮುಖ್ಯಕಾರ್ಯದರ್ಶಿ ನೀಡುವ ಟಿಪ್ಪಣಿ ಮತ್ತು ವರದಿಯ ಅಧ್ಯಯನ ನಡೆಸಿ ವಿಶೇಷ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು.
ಅಭಿಪ್ರಾಯ ವ್ಯಕ್ತವಾದ ನಂತರ ಎಲ್ಲಾ ಕೋನಗಳಿಂದ ಸಾಧಕ-ಬಾಧಕ ಚರ್ಚಿಸಿ, ವರದಿ ಅನುಷ್ಟಾನ ಮಾಡಬೇಕೆ ಅಥವಾ ಪರಿಷ್ಕರಿಸಬೇಕೆ ಎಂಬ ಬಗ್ಗೆ ಅಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ.

ವರದಿ ಸಂಪುಟ ಅಂಗೀಕಾರ
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಹಿಂದುಳಿದ ವರ್ಗಗಳ ಆಯೋಗಗಳ ಅಧ್ಯಕ್ಷರಾದ ಕಾಂತರಾಜ್ 2015ರಲ್ಲಿ, ಜಯಪ್ರಕಾಶ್ ಹೆಗಡೆ 2024ರಲ್ಲಿ ನೀಡಿದ ವರದಿಗಳನ್ನು ಸಂಪುಟ ಅಂಗೀಕರಿಸಿದೆ.
ಸಮೀಕ್ಷೆಯಡಿ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ 54 ಮಾನದಂಡಗಳನ್ನು ಒಳಗೊಂಡ ಅನುಸೂಚಿ ೩ರಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ.
1.60 ಲಕ್ಷ ಸಿಬ್ಬಂದಿ ಬಳಕೆ
ರಾಜ್ಯದಲ್ಲಿ 2015ರಲ್ಲಿ 6.35 ಕೋಟಿ ಜನಸಂಖ್ಯೆಯನ್ನು ಸರ್ವೆ ಮಾಡಲು ಅಂದಾಜಿಸಲಾಗಿತ್ತು, ಇದಕ್ಕಾಗಿ 1.60 ಲಕ್ಷ ಸಿಬ್ಬಂದಿಯನ್ನು ಬಳಕೆ ಮಾಡಲಾಗಿತ್ತು.
ಈ ಮೂಲಕ 1.35 ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ, ಸಮೀಕ್ಷೆಯಲ್ಲಿ ಲಭ್ಯವಾಗಿರುವ ಅಂಕಿ-ಅಂಶಗಳನ್ನು ಬಿಇಎಲ್ ಸಂಸ್ಥೆ ಮೂಲಕ ಗಣಕೀಕರಣಗೊಳಿಸಲಾಗಿದೆ.
ಕಾಂತರಾಜ್ ನೇತೃತ್ವದ ಆಯೋಗ ನೀಡಿದ ವರದಿಯನ್ನು ಆಧಾರವಾಗಿಟ್ಟುಕೊಂಡು ಜಯಪ್ರಕಾಶ್ ಹೆಗಡೆ ಆಯೋಗ ವರದಿ ಸಿದ್ಧಪಡಿಸಿ ನೀಡಿದ ವರದಿ ಅಂಗೀಕರಿಸಲಾಗಿದೆ ಎಂದರು.

ವಿಶೇಷ ಮಂತ್ರಿಮಂಡಲ ಸಭೆ
ಮುಂದೇನು ಕ್ರಮ ಕೈಗೊಳ್ಳಬೇಕೆಂಬ ಕುರಿತು ಚರ್ಚಿಸಲು ವಿಶೇಷ ಮಂತ್ರಿಮಂಡಲ ಸಭೆ ಕರೆಯಲಾಗಿದೆ.
ವರದಿ ಅಂಗೀಕಾರ ವಿಷಯದಲ್ಲಿ ಭಿನ್ನಾಭಿಪ್ರಾಯ ಇರಲಿಲ್ಲ, ಸರ್ವಸಮ್ಮತವಾಗಿ ಸಮೀಕ್ಷಾ ವರದಿಯನ್ನು ಅಂಗೀಕರಿಸಿದೆ.
ಇದರಲ್ಲಿ ಕೆಲವು ಟಿಪ್ಪಣಿಗಳನ್ನು ಮಾಡುವಂತೆ ಮುಖ್ಯಕಾರ್ಯದರ್ಶಿಗಳಿಗೆ ಸಭೆ ಸೂಚಿಸಿದೆ, ಅಲ್ಲಿಯವರೆಗೆ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಹಿಂದುಳಿದ ಆಯೋಗಗಳ ವರದಿಯ ಲಕೋಟೆಯನ್ನು ಅಂಗೀಕರಿಸಿ ಸಭೆಯ ಮುಂದಿಡಲಾಗಿದೆ, ಆದರೆ, ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವವರೆಗೂ ಸರ್ಕಾರ ಈ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದರು.
