ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧದ ಕೇಳಿಬಂದಿರುವ 60% ಕಮಿಷನ್ ಆರೋಪವನ್ನೂ ಎಸ್‌ಐಟಿ ತನಿಖೆಗೆ ವಹಿಸಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪ ತನಿಖೆಗೆ ಸರ್ಕಾರ ಎಸ್‌ಐಟಿ ರಚನೆಗೆ ಮುಂದಾಗಿದೆ, ಈಗಾಗಲೇ ಆಯೋಗ ರಚನೆ ಮಾಡಿದ್ದು ಅದರಲ್ಲಿ ಏನಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದರು.
ರಾಜಕೀಯ ದ್ವೇಷದ ಆರೋಪ
ಕಳೆದ ಎರಡು ವರ್ಷದಿಂದ ಸರ್ಕಾರದಲ್ಲಿ 60% ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ, ಗುತ್ತಿಗೆದಾರರ ಸಂಘ ಬಹಿರಂಗ ಆರೋಪ ಮಾಡಿದೆ, ಬಿಜೆಪಿ ಸರ್ಕಾರದ ಮೇಲೆ ಇದೇ ರೀತಿ ಅಪಪ್ರಚಾರ ಮಾಡಲಾಯಿತು, ರಾಜಕೀಯ ದ್ವೇಷದ ಆರೋಪಕ್ಕೆ ದಾಖಲೆ ಎಲ್ಲಿ ಇರುತ್ತದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರುಗಳು, ಕಮಿಷನ್ ಕೇಳಿದರೆ ಲೋಕಾಯುಕ್ತಕ್ಕೆ ದೂರು ಕೊಡಿ ಎನ್ನುತ್ತಾರೆ, ನಾವೂ ಅದನ್ನೇ ಹೇಳಿದ್ದೆವು, ಆದರೆ ದೂರು ಕೊಡಲಿಲ್ಲ.
ಗುತ್ತಿಗೆದಾರರ ಕಾಮಗಾರಿಗೆ ಜೇಷ್ಠತೆ ಆಧರಿಸಿ ಹಣ ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣ ಇಲ್ಲ, ಟೆಂಡರ್ ಆಗಿದ್ದರೂ ಕೆಲಸ ಮಾಡಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂದರು.
ಜಾತಿ ಗಣತಿ ಆದೇಶ ಮಾಡಬೇಕಿತ್ತು
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ, ಗಣತಿಗೆ ಮುನ್ನ ಜಾತಿ ಗಣತಿ ಎಂಬ ಆದೇಶ ಮಾಡಬೇಕಿತ್ತು, ಸಾಮಾಜಿಕ-ಆರ್ಥಿಕ ಸಮೀಕ್ಷೆ ಎಂಬುದಾಗಿ ಹೇಳಿ ಜಾತಿ ವಿವರ ಬರೆಸಿಕೊಂಡು ಬಂದಿದ್ದಾರೆ.
ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಕೊಟ್ಟ ವರದಿಗೆ ಕಾರ್ಯದರ್ಶಿ, ಸದಸ್ಯರು ಸಹಿ ಹಾಕಿಲ್ಲ, ಅದನ್ನೇ ಪರಿಷ್ಕರಿಸಿ ಇನ್ಬೊಬ್ಬ ಅಧ್ಯಕ್ಷರು ತೇಪೆ ಹಚ್ಚಿ ವರದಿ ನೀಡಿದ್ದಾರೆ.
ಸರ್ಕಾರಕ್ಕೆ ಹಿಂದುಳಿದ ವರ್ಗದ ಬಗ್ಗೆ ಕಾಳಜಿ ಇದ್ದರೆ ವರದಿ ಬಹಿರಂಗ ಪಡಿಸಿ, ಏನು ಯೋಜನೆಗಳನ್ನು ನೀಡುತ್ತಾರೆ ಎಂಬುದನ್ನು ತಿಳಿಸಬೇಕು.
ಅಧ್ಯಯನಕ್ಕೆ ಉಪಸಮಿತಿ
ಮುಂದಿನ ಸಂಪುಟದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ, ಅಧ್ಯಯನಕ್ಕೆ ಮತ್ತೊಂದು ಸಂಪುಟ ಉಪಸಮಿತಿ ಮಾಡುತ್ತಾರೆ.
ಮುಖ್ಯಮಂತ್ರಿಗಳ ಭಾಷಣದಿಂದ ಹಿಂದುಳಿದವರ ಹೊಟ್ಟೆ ತುಂಬಲ್ಲ, ಮೂರ್ನಾಲ್ಕು ವರ್ಷದಿಂದ ವರದಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದು, ಬದ್ಧತೆ ಎಂಬುದೇ ಇಲ್ಲ, ಬದ್ಧತೆ ಇಲ್ಲದ ಕಡೆ ಸಮಿತಿ ನೇಮಕ ಆಗುತ್ತದೆ ಎಂದು ಟೀಕಿಸಿದರು.
