ಬೆಂಗಳೂರು:ದ್ವಿತೀಯ ಪಿಯುಸಿ ಮೊದಲನೇ ಪರೀಕ್ಷೆಯಲ್ಲಿ ನಿಗದಿತ ಅರ್ಹತೆ ಗಳಿಸದ ಹಾಗೂ ಅನುತ್ತೀರ್ಣರಾಗಿ 2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳುತ್ತಿರುವ ಅಭ್ಯರ್ಥಿಗಳೂ ಸಹಾ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಹೊರನಾಡು ಕನ್ನಡಿಗರಿಗೆ ಏಪ್ರಿಲ್ 15ರಂದು ಕನ್ನಡ ಹಾಗೂ 16 ಮತ್ತು 17ರಂದು ವಿಜ್ಞಾನ ವಿಷಯಗಳ ಸಿಇಟಿ ನಡೆಯುಲಿದ್ದು, ಪ್ರಾಧಿಕಾರ ಸಕಲ ತಯಾರಿ ನಡೆಸಿದೆ ಎಂದು ತಿಳಿಸಿದ್ದಾರೆ.
ಉತ್ತಮ ಫಲಿತಾಂಶ
ದ್ವಿತೀಯ ಪಿಯುಸಿ ಮೊದಲನೇ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಾಗ್ಯೂ ಎರಡು ಮತ್ತು ಮೂರನೇ ಪರೀಕ್ಷೆ ಬರೆಯುವ ಅವಕಾಶವಿದ್ದು, ಫಲಿತಾಂಶ ಉತ್ತಮ ಪಡಿಸಿಕೊಳ್ಳಬಹುದಾಗಿದೆ.
ಪಿಯುಸಿ 3ನೇ ಪರೀಕ್ಷೆಯಲ್ಲಿ ಅರ್ಹರಾದವರೂ ಸಿಇಟಿ ರ‍್ಯಾಂಕ್ ಪಡೆದು, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಪಡೆಯಬಹುದಾಗಿದೆ, ಸಿಇಟಿ ಪರೀಕ್ಷೆ ಬರೆಯದಿರುವವರನ್ನು ರ‍್ಯಾಂಕ್‌ಗೆ ಪರಿಗಣಿಸಲಾಗದು.
ಕಳೆದ ವರ್ಷವೂ 3ನೇ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅನೇಕರಿಗೆ ರ‍್ಯಾಂಕ್ ನೀಡಿ, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿತ್ತು, ಆದ್ದರಿಂದ ಸಿಇಟಿ ಪರೀಕ್ಷೆ ತಪ್ಪಿಸಿಕೊಳ್ಳದಂತೆ ಸಲಹೆ ನೀಡಿದ್ದಾರೆ.
3.3 ಲಕ್ಷ ಅಭ್ಯರ್ಥಿಗಳು
ಈ ವರ್ಷ 3.3 ಲಕ್ಷ ಅಭ್ಯರ್ಥಿಗಳು ಸಿಇಟಿ ಬರೆಯಲು ಶುಲ್ಕ ಪಾವತಿಸಿದ್ದು, ಇದುವರೆಗೆ 2.85 ಲಕ್ಷ ಮಂದಿ ತಮ್ಮ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದು, ಇನ್ನೂ ಸುಮಾರು 45 ಸಾವಿರ ಮಂದಿ ಡೌನ್ ಲೋಡ್ ಮಾಡಿಕೊಳ್ಳಬೇಕಿದೆ.
ಪೋಷಕರು ಎಚ್ಚರ ವಹಿಸಿ, ತಮ್ಮ ಮಕ್ಕಳು ಪಿಯುಸಿ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಸರ್ಕಾರ ನೀಡಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಸಿಇಟಿ ಪರೀಕ್ಷೆ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
