ಬೆಂಗಳೂರು:ಹೊರರಾಜ್ಯಗಳಿಂದ ಬಂದವರಿಂದಲೇ ಕರ್ನಾಟಕದಲ್ಲಿ ಹೆಚ್ಚು ಅಪರಾಧ ಕೃತ್ಯಗಳು ಜರುಗುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಲದ ಕಾನೂನಿನ ಅರಿವಿಲ್ಲದೆ, ಹೊರಗಿನವರು ಇಲ್ಲಿ ತಮ್ಮ ರಾಜ್ಯಗಳಲ್ಲಿ ನಡೆದುಕೊಳ್ಳುವ ರೀತಿ ಇಲ್ಲಿಯೂ ನಡೆದುಕೊಳ್ಳುತ್ತಿದ್ದಾರೆ.
ಕಟ್ಟಡ ಕಾರ್ಮಿಕರೇ ಹೆಚ್ಚು
ಅದರಲ್ಲೂ ಕಟ್ಟಡ ಕಾಮಗಾರಿ ನಡೆಸುವ ಕಾರ್ಮಿಕರೇ ಹೆಚ್ಚು ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಅಂಕಿ-ಅಂಶಗಳಿಂದ ಬಯಲಾಗಿವೆ.
ಲೈಂಗಿಕ ದೌರ್ಜನ್ಯ, ಕೊಲೆ, ಸುಲಿಗೆ ಮತ್ತು ಆಂತರಿಕ ಬಡಿದಾಟಗಳು ಇವರದೇ ಹೆಚ್ಚು, ಇದನ್ನು ತಡೆಗಟ್ಟುವಲ್ಲಿ ಕಾರ್ಮಿಕ ಇಲಾಖೆಯೊಂದಿಗೆ ಸಭೆ ನಡೆಸಿ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ.
ಕಾನೂನು ಸುವ್ಯವಸ್ಥೆ
ಕಟ್ಟಡ ಕಾಮಗಾರಿ ಸೇರಿದಂತೆ ಕೆಳಹಂತದ ಕೆಲಸಗಳಿಗೆ ಹೊರರಾಜ್ಯದವರನ್ನು ದೊಡ್ಡ ಸಂಖ್ಯೆಯಲ್ಲಿ ಕರೆತರುತ್ತಿರುವುದೇ ಕಾನೂನು ಸುವ್ಯವಸ್ಥೆ ಹದಗಡಲು ಮೂಲ ಕಾರಣವಾಗಿದೆ.
ಸ್ಥಳೀಯವಾಗಿ ಕಾರ್ಮಿಕರು ದೊರೆಯದ ಕಾರಣ ಗುತ್ತಿಗೆದಾರರು, ಹೋಟೆಲ್ ಮಾಲಿಕರು ಮತ್ತು ಇತರೆ ಉದ್ಯಮಿಗಳು ಹೊರರಾಜ್ಯದವರ ಮೇಲೆ ಅವಲಂಬಿತರಾಗಿದ್ದಾರೆ.
ಮುಂಜಾಗೃತಾ ಕ್ರಮ
ಕಾರ್ಮಿಕರನ್ನು ಕರೆತಂದವರು ಕೆಲವು ಮುಂಜಾಗೃತಾ ಕ್ರಮಕೈಗೊಳ್ಳಬೇಕು, ಈ ಕಾರ್ಯವನ್ನು ಅವರು ಮಾಡುತ್ತಿಲ್ಲ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಇವರದೇ ಪಾತ್ರ ಹೆಚ್ಚು.
ಹಿರಿಯ ಪೋಲಿಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವುದಾಗಿ ತಿಳಿಸಿದರು.
