ಬೆಂಗಳೂರು:ಹಿಂದುಳಿದ ವರ್ಗಗಳ ಆಯೋಗದ ವರದಿ ಸೋರಿಕೆ ಆಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸೋರಿಕೆಗೆ ನಿಮ್ಮ ಸರ್ಕಾರವೇ ಹೊಣೆ, ಈ ವರದಿಯನ್ನು ಸಂಪುಟದಲ್ಲಿ ಮಂಡಿಸಲೇಬಾರದು, ಮಂಡಿಸಿ ಅದರ ಪಾವಿತ್ರ್ಯತೆಯನ್ನು ಹಾಳು ಮಾಡಬೇಡಿ.
ಗ್ಯಾಂಗ್‌ನ ಕೈಚಳಕ
ಆಯೋಗದಿಂದ ಸೋರಿಕೆಯಾಯಿತಾ ಅಥವಾ ಸಂಪುಟದಲ್ಲಿ ಸಚಿವರ ಕೈಸೇರಿದ ಮೇಲೆ ಸೋರಿಕೆಯಾಯಿತಾ ಅಥವಾ ನಿಮ್ಮ ಗ್ಯಾಂಗ್‌ನ ಕೈಚಳಕವಾ ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸೋರಿಕೆ ಮಾಡಿ ನೆಮ್ಮದಿಯಾಗಿದ್ದ ರಾಜ್ಯಕ್ಕೆ ಬೆಂಕಿ ಹಾಕಿದ್ದೀರಿ, ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತಿದ್ದೀರಿ, ಸಿದ್ದರಾಮಯ್ಯನವರೇ ನಿಮ್ಮ ದುರುದ್ದೇಶ, ದುಷ್ಟತನದ ಪರಾಕಾಷ್ಠೆ ಇದು ಎಂದು ಕಿಡಿಕಾರಿದ್ದಾರೆ.
ಉಲ್ಟಾ ಹೊಡೆದ ಮುಖ್ಯಮಂತ್ರಿ
ಮಾಹಿತಿ ಸೋರಿಕೆ ಆಗುತ್ತಿದ್ದಂತೆ ನೀವು ಉಲ್ಟಾ ಹೊಡೆದಿದ್ದೀರಿ, ಅದು ಜಾತಿ ಸಮೀಕ್ಷೆ ಅಲ್ಲ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಎಂದು ಹೊಸ ಪೀಪಿ ಊದುತ್ತಿದ್ದೀರಿ.
ಹಾಗಾದರೆ, ಹಾದಿಬೀದಿಯಲ್ಲಿ ತೇಲಾಡುತ್ತಿರುವ, ಹೊರಳಾಡುತ್ತಿರುವ ಅಂಕಿ-ಸಂಖ್ಯೆಗಳು ಏನು, ಸೋರಿಕೆ ಆಗಿರುವ ದತ್ತಾಂಶ ಮತ್ತು ಸಿದ್ದರಾಮಯ್ಯ ಹೇಳಿದ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ದತ್ತಾಂಶ ಎರಡು ಒಂದೆಯೇ ಅಥವಾ ಬೇರೆಯೇ ಎಂದು ಪ್ರಶ್ನಿಸಿದ್ದಾರೆ.
