ಬೆಂಗಳೂರು:ಜಾತಿ ಗಣತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವ ಪಕ್ಷ ಸಭೆ ಕರೆಯುವಂತೆ ಜಾತ್ಯತೀತ ಜನತಾದಳ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಮೀಸಲಾತಿ ವರದಿಗೆ ವಿರೋಧವಿಲ್ಲ, ಆದರೆ, ವರದಿ ದತ್ತಾಂಶ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿದೆ ಎಂದರು.
ಸರ್ವ ಪಕ್ಷ ಸಭೆ
ಎಲ್ಲ ಗೊಂದಲ ಬಗೆಹರಿಸಲು ಚಿಂತಕರು ಮತ್ತು ಸರ್ವಪಕ್ಷ ನಾಯಕರ ಸಭೆ ಕರೆದು ಸರ್ಕಾರ ಮುಂದಿನ ನಿರ್ಣಯ ಕೈಗೊಳ್ಳಬೇಕು.
ನಾವು ಯಾವುದೇ ಜಾತಿ, ಧರ್ಮದ ವಿರುದ್ಧ ಇಲ್ಲ, ಸಮೀಕ್ಷೆ ಸರಿಯಿಲ್ಲ ಎಂದಷ್ಟೇ ಹೇಳುತ್ತಿದ್ದೇವೆ, ವರದಿಯ ಅಂಕಿ-ಅಂಶಗಳನ್ನು ಜನರ ಮುಂದಿಡಿ ಸಾರ್ವಜನಿಕವಾಗಿ ಚರ್ಚೆಯಾಗಲಿ.
ಯಾವುದನ್ನೋ ಮರೆಮಾಚಲು ವರದಿಯನ್ನು ಮುಂದಿಟ್ಟು ರಾಜಕೀಯ ಮಾಡುವುದನ್ನು ಬಿಡಿ ಎಂದು ಮುಖ್ಯಮಂತ್ರಿ ಅವರಿಗೆ ಕಿವಿಮಾತು ಹೇಳಿದರು.

ಮೂಗು ತೂರಿಸುವುದು ಸರಿಯಲ್ಲ
ಕರ್ನಾಟಕದ ಭೂಪಟ ಅರಿಯದ ಕಾಂಗ್ರೆಸ್‌ನ ದೆಹಲಿ ವರಿಷ್ಠರು ಮೀಸಲಾತಿ ವಿಷಯದಲ್ಲಿ ಮೂಗು ತೂರಿಸುವುದು ಸರಿಯಲ್ಲ.
ವರಿಷ್ಠರನ್ನು ಮುಂದಿಟ್ಟುಕೊಂಡು ವರದಿ ಶಿಫಾರಸು ಜಾರಿ ಪ್ರಯತ್ನ ಮಾಡಬೇಡಿ, ಸಾರ್ವಜನಿಕರ ಕೂಗಿಗೆ ಮನ್ನಣೆ ನೀಡದಿದ್ದರೆ, ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರದ ಆಡಳಿತದಲ್ಲಿ ವೈಫಲ್ಯಗಳು, ಲೋಪದೋಷಗಳು ಕಂಡುಬಂದಾಗ ಮುಖ್ಯಮಂತ್ರಿ ಅವರು ಒಂದಲ್ಲಾ ಒಂದು ವಿವಾದವನ್ನು ಮುನ್ನೆಲೆಗೆ ಬಿಟ್ಟು ತಮ್ಮ ರಾಜಕೀಯ ಚಾಣಕ್ಯತನ ತೋರುತ್ತಾರೆ.
ಗೊಂದಲ ವಿಚಾರಗಳು ಮುನ್ನೆಲೆಗೆ
ಹನಿಟ್ರ್ಯಾಪ್, ಚಿನ್ನ ಕಳ್ಳಸಾಗಣೆ, ನಾಯಕತ್ವ ಬದಲಾವಣೆ, ಕಮಿಷನ್ ದಂಧೆ ವಿಚಾರಗಳು ಮುನ್ನೆಲೆಗೆ ಬರುತ್ತಿದ್ದಂತೆ ಕಾಂತರಾಜ್ ವರದಿ ಬಹಿರಂಗ ಪಡಿಸಿದ್ದಾರೆ.

ಇದರ ಬಗ್ಗೆ ಇನ್ನು ಮೂರು ನಾಲ್ಕು ತಿಂಗಳು ಚರ್ಚೆ ನಡೆಯುತ್ತಿರುತ್ತದೆ, ಅಲ್ಲಿಯವರೆಗೂ ಮುಖ್ಯಮಂತ್ರಿ ನಿರಾಳರಾಗಿರುತ್ತಾರೆ.
ಸಿದ್ದರಾಮಯ್ಯ ಕಳೆದ 2 ವರ್ಷಗಳಿಂದ ಅಭಿವೃದ್ಧಿ ಮಾಡದೆ ಇಂತಹ ರಾಜಕೀಯ ಚಮತ್ಕಾರಗಳನ್ನು ಮಾಡಿಕೊಂಡೇ ಕಾಲ ಕಳೆದಿದ್ದಾರೆ ಎಂದು ಆರೋಪಿಸಿದರು.
ಯಾರಿಗೂ ಬೇಡವಾದ ವರದಿ
ಗೊಂದಲದ ಗೂಡಾಗಿರುವ ಕಾಂತರಾಜ್ ವರದಿ ಯಾರಿಗೂ ಬೇಡವಾಗಿದೆ, ಈ ವರದಿ ಬಗ್ಗೆ ನಂತರ ಬಂದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೇ ಅಪಸ್ವರ ಎತ್ತಿದ್ದರು.
ಇಂತಹ ವರದಿಯನ್ನು ಮುಖ್ಯಮಂತ್ರಿ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಸಾರ್ವಜನಿಕರ ಹಿತಕ್ಕಲ್ಲ ಎಂದರು.
