ಬೆಂಗಳೂರು:ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಲೋಕಾಯುಕ್ತರಿಗೆ ದೂರು ನೀಡಿದೆ.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದ ನಿಯೋಗ ಲೋಕಾಯುಕ್ತರನ್ನು ಭೇಟಿ ಮಾಡಿ ಹಗರಣಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡ ದೂರು ನೀಡಿದರು.

ಪ್ರಕರಣ ತಾರ್ಕಿಕ ಅಂತ್ಯಕ್ಕೆ
ದೂರಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ ಮತ್ತಿತರರು, ಭ್ರಷ್ಟಾಚಾರ ಹಗರಣ ಕುರಿತು ಲೋಕಾಯುಕ್ತ ಎಸ್ಪಿ ಅವರಿಗೆ ದೂರು ನೀಡಿ ಸವಿಸ್ತಾರವಾಗಿ ವಿವರಿಸಿದ್ದೇವೆ, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಮನವಿ ಮಾಡಿದ್ದೇವೆ ಎಂದರು.
ಇಂಧನ ಸಚಿವ ಕೆ.ಜೆ.ಜಾರ್ಜ್ 9 ಸುಳ್ಳು ಹೇಳಿದ್ದಾರೆ, ಬೇನಾಮಿ, ದುರ್ಬಳಕೆ ನಡೆದಿರುವುದು, ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಬಲವಂತವಾಗಿ ಮಾಡಲಾಗುತ್ತಿದೆ.
ಸಚಿವ ಕೆ.ಜೆ.ಜಾರ್ಜ್, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ಎಂ.ಡಿ. ಮಹಂತೇಶ್, ತಾಂತ್ರಿಕ ನಿರ್ದೇಶಕರಾದ ರಮೇಶ್, ಬಾಲಾಜಿ ಮತ್ತಿತರರ ವಿರುದ್ಧ ಅಧಿಕಾರ ದುರ್ಬಳಕೆ ದೂರು ನೀಡಿದ್ದೇವೆ, ಗುತ್ತಿಗೆ ಕೊಡುವಲ್ಲಿ ಕಾನೂನು ಉಲ್ಲಂಘನೆಯಾಗಿದೆ, ಬ್ಲ್ಯಾಕ್ಲಿಸ್ಟ್ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.
