ಬೆಂಗಳೂರು:ಕನ್ನಡಿಗ ವಿಕಾಸ್ ಕುಮಾರ್ ಮೇಲೆ ಹಲ್ಲೆ ನಡೆಸಿರುವ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಗರ ಪೋಲಿಸ್ ಕಮಿಷನರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆದೇಶಿಸಿದ್ದಾರೆ.
ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ತರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.
ನ್ಯಾಯ ಕೊಡಿಸಲು ಬದ್ಧ
ಹಲ್ಲೆ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧ ಎಂದಿದ್ದಾರೆ.
ವಾಹನಕ್ಕೆ ತಾಗಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ವಿಂಗ್ ಕಮಾಂಡರ್, ನಂತರ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸಿ, ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ.

ಕನ್ನಡಿಗರು ಮಾತೃ ಭಾಷೆ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ, ಭಾಷೆಯ ವಿಚಾರದಲ್ಲಿ ವಿನಾಕಾರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದಲ್ಲ.
ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದು
ರಾಷ್ಟ್ರದ ವಿವಿಧ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನೂ ಗೌರದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದು, ಇದಕ್ಕೆ ಇತಿಹಾಸ ಸಾಕ್ಷಿ ಎಂದಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿ ಧರ್ಮ ಮರೆತು, ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಜನತೆಗೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾಧನೀಯ.
ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೇ ಸರ್ಕಾರ ಕರ್ನಾಟಕದಲ್ಲಿದೆ, ತಾನು ಮಾಡಿದ ಹಲ್ಲೆಯನ್ನು ವಿರೋಧಿಗಳ ಮೇಲೆ ಹೊರಿಸಿದವರನ್ನು ಸುಮ್ಮನೇ ಬಿಡುವುದಿಲ್ಲ ಎಂದಿದ್ದಾರೆ.

ಹಲ್ಲೆ ಖಂಡಿನೀಯ
ಮುಖ್ಯಮಂತ್ರಿ ಹೇಳಿಕೆಗೂ ಮುನ್ನ ಜೆಡಿಎಸ್‌ನ ಯುಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘಟನೆ ಸಂಬಂಧ ಟ್ವೀಟ್ ಮಾಡಿ, ಬೆಂಗಳೂರಿನಲ್ಲಿ ಐಎಎಫ್ ವಿಂಗ್ ಕಮಾಂಡರ್ ಕನ್ನಡಿಗ ವಿಕಾಸ್ ಕುಮಾರ್ ಮೇಲೆ ಹಲ್ಲೆ ನಡೆಸಿರುವುದು ಸ್ವೀಕಾರಾರ್ಹವಲ್ಲ, ಖಂಡಿನೀಯ ಎಂದಿದ್ದಾರೆ.
ಇಂತಹ ಅಧಿಕಾರ ದುರುಪಯೋಗ ನಿರ್ಲಕ್ಷಿಸಲಾಗದು, ನಾವು ವಿಕಾಸ್ ಜೊತೆ ದೃಢವಾಗಿ ನಿಲ್ಲುತ್ತೇವೆ, ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ಮೂಲಕ ನ್ಯಾಯ ಕೋರುತ್ತೇವೆ.
ವಿಕಾಸ್ ಕುಮಾರ್ ಅಥವಾ ಅವರ ಕುಟುಂಬದೊಂದಿಗೆ ನನ್ನನ್ನು ಸಂಪರ್ಕಿಸಲು ಯಾರಾದರೂ ಸಹಾಯ ಮಾಡಬಹುದಾದರೆ, ದಯವಿಟ್ಟು ಮೆಸೇಜ್ ಮಾಡಿ, ನಾನು ಸಹಾಯ ಮಾಡಲು ಬಯಸುತ್ತೇನೆ ಎಂದಿದ್ದಾರೆ.
