ಗದಗ:ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಗೆ ವಿದೇಶದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳುವ ಕನಿಷ್ಠ ಸೌಜನ್ಯವೂ ಇಲ್ಲದಿರುವುದು ದುರ್ದೈವದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಸಂದರ್ಭದಲ್ಲಿ ಪುನಃ ಭಾರತಕ್ಕೆ ಅಪಮಾನ ಮಾಡುವಂತೆ ಮಾತನಾಡಿದ್ದಾರೆ, ಈ ಪುಣ್ಯಾತ್ಮ ಹೊರದೇಶಕ್ಕೆ ಹೋದಾಗ ದೇಶದ ಬಗ್ಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನೇ ಕಲಿತಿಲ್ಲ ಎಂದರು.
ಅವಹೇಳನಕಾರಿ ಮಾತು
ಭಾರತದ ಸಂವಿಧಾನಾತ್ಮಕ ಸಂಸ್ಥೆಯಾದ ಚುನಾವಣಾ ಆಯೋಗದ ಕಾರ್ಯ ಕುರಿತು ಅಮೆರಿಕದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಅಮೆರಿಕದಲ್ಲಿ ಭಾರತದ ಸಂವಿಧಾನಾತ್ಮಕ ಸಂಸ್ಥೆ ಕುರಿತು ಅನಗತ್ಯ ಟೀಕೆ ಮಾಡುವುದು ಮೂರ್ಖತನದ ಪರಮಾವಧಿ, ಇದು ಲೋಕಸಭೆಯ ವಿರೋಧಪಕ್ಷದ ನಾಯಕನ ಬೇಜವಾಬ್ದಾರಿ ನಡೆ.
ಕಾಂಗ್ರೆಸ್ ಗೆದ್ದಾಗ ಒಂದು ಮಾನದಂಡ, ಸೋತಾಗ ಒಂದು ಮಾನದಂಡ ಇಟ್ಟುಕೊಂಡು ಮಾತನಾಡುತ್ತದೆ, ರಾಹುಲ್ ಗಾಂಧಿಗೆ ಮಹಾರಾಷ್ಟ್ರದಲ್ಲಿ ಹಿನ್ನಡೆ ಆಗಿದ್ದರೆ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಬಹುದಿತ್ತು.
ಚುನಾವಣಾ ಆಯೋಗ
ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗ ಬಿಜೆಪಿಗೆ ಸಹಕರಿಸಿದ್ದರೆ, ಕಾಂಗ್ರೆಸ್‌ಗೆ ಮೋಸ ಆಗಿದ್ದರೆ, ತೆಲಂಗಾಣ ವಿಷಯದಲ್ಲೂ ಹಾಗೆಯೇ ಮಾಡಬಹುದಿತ್ತಲ್ಲವೇ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಚುನಾವಣಾ ಆಯೋಗ ಬಿಜೆಪಿಗೆ ಸಹಕರಿಸಿದ್ದರೆ, ಅಲ್ಲಿಯೂ ಅಧಿಕಾರಕ್ಕೆ ಬರಬಹುದಿತ್ತು, ತೆಲಂಗಾಣದಲ್ಲಿ ಗೆದ್ದಾಗ ಒಂದು ಮಾನದಂಡ, ಒಂದು ರೀತಿ ಹೇಳಿಕೆ, ಮಹಾರಾಷ್ಟ್ರದಲ್ಲಿ ಸೋತಾಗ ಇನ್ನೊಂದು ರೀತಿ ಹೇಳಿಕೆ ಎಂದು ಟೀಕಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ದರ ಏರಿಕೆಯ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಎರಡು ಹಂತಗಳನ್ನು ಮುಗಿಸಿ, ಮೂರನೇ ಹಂತ ಗದಗದಿಂದ ಆರಂಭವಾಗಿದೆ.

ಜನಾಕ್ರೋಶ ಯಾತ್ರೆಗೆ ಜನ ಬೆಂಬಲ
ಜನಾಕ್ರೋಶ ಯಾತ್ರೆಗೆ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಿದ್ದಾರೆ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ, ಇದರ ಪರಿಣಾಮ ಕರ್ನಾಟಕ ಅತ್ಯಂತ ದುಬಾರಿ ಜೀವನ ನಿರ್ವಹಣೆ ರಾಜ್ಯ ಎಂಬ ಸ್ಥಿತಿಗೆ ತಲುಪಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ, ವಾಲ್ಮೀಕಿ ನಿಗಮ ಹಗರಣ ಸಂಬಂಧ ಬಿಜೆಪಿ ಹೋರಾಟ ಕೈಗೆತ್ತಿಕೊಂಡ ಪರಿಣಾಮ ಸಚಿವರೂಬ್ಬರು ರಾಜೀನಾಮೆ ಕೊಡಬೇಕಾಯಿತು.
ಮೈಸೂರಿನ ಮುಡಾ ಹಗರಣದಲ್ಲಿ ತಪ್ಪೆಸಗಿಲ್ಲ, ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದರು, ಆದರೆ, ಅವರ ಕುಟುಂಬ ೬೨ ಕೋಟಿ ರೂ. ಮೌಲ್ಯದ ೧೪ ಬಿಡಿ ನಿವೇಶನಗಳನ್ನು ಯಾವುದೇ ಷರತ್ತಿಲ್ಲದೆ ವಾಪಸ್ ಮಾಡಿದೆ, ಇದರರ್ಥ ಸಿದ್ದರಾಮಯ್ಯ ಕ್ಲೀನ್ ರಾಜಕಾರಣಿ ಅಲ್ಲ, ಭ್ರಷ್ಟ ರಾಜಕಾರಣಿ ಎಂಬುದು ಸಾಭೀತಾಗಿದೆ, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
