ಬೆಂಗಳೂರು:ಜಮ್ಮು-ಕಾಶ್ಮೀರಕ್ಕೆ ಪ್ರವಾಸ ತೆರಳಿರುವ 40ಕ್ಕೂ ಹೆಚ್ಚು ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ನಿನ್ನೆ ಭಯೋತ್ಪಾಕ ದಾಳಿಯಿಂದಾಗಿ ಸುಮಾರು 27 ಮಂದಿ ಪ್ರವಾಸಿಗರು ಮೃತಪಟ್ಟಿದ್ದು, ಇವರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ.

ಸುರಕ್ಷತೆಗೆ ಕ್ರಮ
ಭಯೋತ್ಪಾದಕ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಪ್ರತಿಯೊಬ್ಬ ಕನ್ನಡಿಗನನ್ನು ಮರಳಿ ರಾಜ್ಯಕ್ಕೆ ಕ್ಷೇಮವಾಗಿ ಕರೆತರುವ ಸಂಕಲ್ಪದೊಂದಿಗೆ ನಮ್ಮ ಸರ್ಕಾರ ಕಾರ್ಯಾಚರಣೆಗೆ ಇಳಿದಿದೆ, ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಕಾಶ್ಮೀರದಲ್ಲಿನ ಪ್ರವಾಸೀ ಕನ್ನಡಿಗರ ಸುಕ್ಷತಾ ಕಾರ್ಯಗಳನ್ನು ನೋಡಿಕೊಳ್ಳಲು ಸಚಿವ ಸಂತೋಷ್ ಲಾಡ್ ಅವರನ್ನು ಆ ರಾಜ್ಯಕ್ಕೆ ಕಳುಹಿಸಲಾಗಿದೆ.
ಮುಖ್ಯಮಂತ್ರಿ ಸಾಂತ್ವನ
ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ ಮೃತರಾದ ಕುಟುಂಬದವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ.
ಶಿವಮೊಗ್ಗದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಹಾಗೂ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ಪತ್ನಿ ಸುಜಾತ ಅವರೊಂದಿಗೆ ಮುಖ್ಯಮಂತ್ರಿ ಅವರು ಮಾತನಾಡಿ ಧೈರ್ಯ ಹೇಳಿದರು.
