ಬೆಂಗಳೂರು:ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್‌ಶಿಪ್ ನಿರ್ಮಾಣಕ್ಕೆ ಬಡ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಸೇರಿದಂತೆ ಸರ್ಕಾರದ ವಿವಿಧ ಪ್ರಾಧಿಕಾರಗಳು ರಾಮನಗರ, ಬಿಡದಿ ಸುತ್ತಮುತ್ತಲು ಹಲವಾರು ವಸತಿ ಯೋಜನೆಗಳನ್ನು ರೂಪಿಸಿ ರೈತರ ಜಮೀನು ಸ್ವಾಧೀನಪಡಿಸಿಕೊಂಡು ಯೋಜನೆ ಅನುಷ್ಟಾನಕ್ಕೆ ಮುಂದಾಗಿವೆ ಎಂದಿದ್ದಾರೆ.
ಜೀವನ ನಿರ್ವಹಣೆಗೆ ಧಕ್ಕೆ
ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ರೈತ ಕುಟುಂಬಗಳ ಜೀವನ ನಿರ್ವಹಣೆಗೆ ಧಕ್ಕೆ ಉಂಟಾಗಿ, ರೈತ ಕುಟುಂಬದ ಯುವಜನರು ನಿರುದ್ಯೋಗಿಗಳಾಗಿ ಬೀದಿ ಪಾಲಾಗಲಿದ್ದಾರೆ.

ಬಡ ರೈತರ ಜೀವನೋಪಾಯಕ್ಕೆ ಕೃಷಿ ಭೂಮಿಯೇ ಆಧಾರ, ಅದನ್ನು ಕಸಿದು ಅವರನ್ನು ಬೀದಿಪಾಲು ಮಾಡಬೇಡಿ.
ಈಗಾಗಲೇ ರಾಮನಗರ ಮತ್ತು ಕನಕಪುರ ತಾಲ್ಲೂಕುಗಳಲ್ಲಿ ಸರ್ಕಾರ ಕೈಗಾರಿಕಾ ಅಭಿವೃದ್ಧಿಗಾಗಿ ಸಾವಿರಾರು ಎಕರೆ ರೈತರ ಭೂಮಿ ವಶಪಡಿಸಿಕೊಂಡು ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಮುಂದಾಗಿದೆ.
ಖಾಸಗಿ ಕೈಗಾರಿಕೆ
ಜಿಲ್ಲೆಯು ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಂತೆ ಇದ್ದು, ಹಲವಾರು ಉದ್ಯಮಿಗಳು ಖಾಸಗಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ.
ಉಳಿದಿರುವ ಕೃಷಿ ಭೂಮಿಯಲ್ಲಿ ರೈತರು ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕಾ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ.
ಬಹುಪಾಲು ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದು, ಅವರು ತಮ್ಮ ಜಮೀನಿನಲ್ಲಿ ಲಕ್ಷಾಂತರ ಮರಗಿಡಗಳನ್ನು ಬೆಳೆಸಿದ್ದು, ಇಂತಹ ಪ್ರದೇಶವನ್ನು ಟೌನ್‌ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಂಡರೆ ಪರಿಸರಕ್ಕೂ ಧಕ್ಕೆ ಆಗುತ್ತದೆ, ಇದನ್ನು ಮನಗಂಡು ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದ್ದಾರೆ.
