ಬೆಂಗಳೂರು:ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಇಂದು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.
ಅಂಗೀಕಾರಕ್ಕೆ ಷರತ್ತು
ರಾಜೀನಾಮೆ ಅಂಗೀಕಾರಕ್ಕೆ ಮುನ್ನ ಕೆಲವು ಷರತ್ತುಗಳನ್ನು ಸಭಾಧ್ಯಕ್ಷರ ಮುಂದಿಟ್ಟಿದ್ದಾರೆ.
ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶಾಸಕ ಸ್ಥಾನಕ್ಕೆ ನೀಡುವ ರಾಜೀನಾಮೆ ಅಂಗೀಕಾರದ ನಂತರ ತಮ್ಮ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ಸಭಾಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾನಂದ ಪಾಟೀಲ್, ನನಗೆ ಯತ್ನಾಳ್ ಹಾಕಿರುವ ಸವಾಲು ಸ್ವೀಕರಿಸಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ.

ಪಕ್ಷಕ್ಕೆ ಸಂಬಂಧವಿಲ್ಲ
ಪಕ್ಷ ಮತ್ತು ಸರ್ಕಾರಕ್ಕೂ ನನ್ನ ರಾಜೀನಾಮೆಗೂ ಸಂಬಂಧವಿಲ್ಲ, ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರದಿಂದ ಮಂತ್ರಿ ಸ್ಥಾನವೂ ಹೋಗುತ್ತದೆ.
ನಾನು ತೆಗೆದುಕೊಂಡ ತೀರ್ಮಾನವನ್ನು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಗಮನಕ್ಕೂ ತಂದಿಲ್ಲ, ಇದು ನನ್ನ ವೈಯಕ್ತಿಕ ವಿಚಾರ.
ವಿಜಯಪುರದಲ್ಲಿ ಮುಸ್ಲೀಮರು ಯತ್ನಾಳ್ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಿದ್ದು ನಿಜ, ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಈ ಸಮುದಾಯವನ್ನು ಅವರು ಮೇಲಿಂದ ಮೇಲೆ ಟೀಕಿಸುತ್ತಿದ್ದಾರೆ.
ಯತ್ನಾಳ್ ಮಾತಿಗೆ ಖಂಡನೆ
ಇತ್ತೀಚೆಗೆ ಮೊಹಮ್ಮದ್ ಪೈಗಂಬರ್ ಕುರಿತು ಯತ್ನಾಳ್ ಮಾತನಾಡಿದ್ದನ್ನು ಬಹಳಷ್ಟು ಮಂದಿ ಖಂಡಿಸಿದ್ದರು.
ಇದುವರೆಗೂ ಅವರು ಮಾಡಿರುವ ಟೀಕೆಗಳನ್ನು ಸಹಿಸಿಕೊಂಡಿದ್ದೇವೆ, ಆದರೆ, ಇನ್ನು ಸಹಿಸುವುದಿಲ್ಲ ಎಂದು ಮುಸ್ಲೀಮರು ಪ್ರತಿಭಟನೆ ಹಮ್ಮಿಕೊಂಡಿದ್ದರು, ಆ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರಿಗೂ ಆಹ್ವಾನವಿತ್ತು, ಆದರೆ, ಅವರು ಪಾಲ್ಗೊಂಡಿರಲಿಲ್ಲ, ನಾನು ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಯತ್ನಾಳ್, ವೈಯ್ತಕಿಕವಾಗಿ ಅಲ್ಲದೆ, ನನ್ನ ಕುಟುಂಬವನ್ನೂ ಟೀಕಿಸಿದ್ದಾರೆ.
ಸವಾಲು ಸೀಕರಿಸಿದ್ದೇನೆ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಚುನಾವಣೆಯಲ್ಲಿ ನಿಂತು ಗೆಲ್ಲಲಿ ಎಂಬ ಸವಾಲು ಹಾಕಿದ್ದರು, ಅದನ್ನು ನಾನು ಸೀಕರಿಸಿದ್ದೇನೆ.
ಅವರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿ, ನಮ್ಮಿಬ್ಬರಿಂದ ತೆರವಾಗುವ ಕ್ಷೇತ್ರಗಳ ಪೈಕಿ ಅವರು ಯಾವ ಕ್ಷೇತ್ರದಿಂದ ಬಯಸುತ್ತಾರೋ ಅಲ್ಲಿಂದ ಕಣಕ್ಕಿಳಿಯಲು ನಾನು ಸಿದ್ಧ ಎಂದು ಸವಾಲು ಹಾಕಿದರು.
ನಾನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಲ್ಲದೆ, ಪಕ್ಷೇತರನಾಗಿಯೂ ಚುನಾವಣೆ ಗೆದ್ದಿದ್ದೇನೆ, ನನಗೇನೂ ಭಯವಿಲ್ಲ, ನಾನು ಬಿಜೆಪಿಯಿಂದ ಸ್ಪರ್ಧಿಸಿದ್ದಾಗ ಯತ್ನಾಳ್ ಅವರನ್ನು ಸಂಸದರಾಗಿ ಆಯ್ಕೆಯಾಗಲು ನೆರವಾಗಿದ್ದೆ ಎಂದರು.
ಶಾಸಕರ ವೈಯಕ್ತಿಕ ಸವಾಲು
ಈ ಮಧ್ಯೆ ಸಭಾಧ್ಯಕ್ಷ ಯು.ಟಿ.ಖಾದರ್ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ್ದಾರೆ, ಅವರಿಗೆ ಇನ್ನೊಬ್ಬ ಶಾಸಕರು ವೈಯಕ್ತಿಕ ಸವಾಲು ಹಾಕಿದ್ದಾರೆ.
ಸವಾಲು ಸ್ವೀಕಾರ ಮಾಡಿ ರಾಜೀನಾಮೆ ನೀಡಿದ್ದಾರೆ, ಸವಾಲು ಹಾಕಿದವರು ರಾಜೀನಾಮೆ ನೀಡಿದ ಬಳಿಕ ನನ್ನ ರಾಜೀನಾಮೆ ಅಂಗೀಕರಿಸಿ ಎಂದಿದ್ದಾರೆ.
ಅವರ ಆತ್ಮಗೌರವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ, ಸಂವಿಧಾನ ನಿಯಮಾವಳಿ ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂದರು.
