ಬೆಂಗಳೂರು:ವಾರಾಣಸಿಯ ಗಂಗಾರತಿ ಮಾದರಿಯಲ್ಲಿ ಮೈಸೂರು ದಸರಾ ವೇಳೆಗೆ ಕನ್ನಂಬಾಡಿ ಅಣೆಕಟ್ಟೆ ಸಮೀಪ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರಕಟಿಸಿದ್ದಾರೆ.
ಕೆಆರ್‌ಎಸ್‌ನ ಬೃಂದಾವನ ಉದ್ಯಾನ ಸಮೀಪ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿ ಆರತಿ ಕಾರ್ಯಕ್ರಮ ನಡೆಸುವ ಸಂಬಂಧ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮುಜರಾಯಿ ಇಲಾಖೆ ಜೊತೆ ಉನ್ನತ ಮಟ್ಟದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕಾವೇರಿ ನದಿ ಕರ್ನಾಟಕಕ್ಕೆ ಮಾತ್ರವಲ್ಲದೆ, ಕೇರಳ, ತಮಿಳುನಾಡು, ಪುದುಚೇರಿ ರಾಜ್ಯಗಳ ರೈತರ ಪಾಲಿಗೂ ವರದಾನವಾಗಿದೆ.
ಕಾವೇರಿ ಪಾತ್ರದ ರಾಜ್ಯಗಳ ಸಂಸ್ಕೃತಿ
ಕರ್ನಾಟಕದ ಸಂಸ್ಕೃತಿ ಜೊತೆಗೆ ತಮಿಳುನಾಡು, ಕೇರಳದ ಸಂಸ್ಕೃತಿ ಅಳವಡಿಸಿಕೊಂಡು ಕಾವೇರಿ ಮಾತೆಗೆ ಆರತಿ ಸಲ್ಲಿಸಲಾಗುವುದು.
ಪೂಜಾ ಕಾರ್ಯಕ್ರಮ ಕುರಿತು ಮಂಡ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಧಾರ್ಮಿಕ ದತ್ತಿ ಇಲಾಖೆ, ಇದರ ರೂಪರೇಷೆ ಸಿದ್ಧಪಡಿಸಲಿದೆ, ಈ ಮಹತ್ವದ ಕಾರ್ಯಕ್ರಮಕ್ಕೆ ಸರ್ಕಾರ 100 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಪ್ರವಾಸಿಗರ ಆಕರ್ಷಣೆ ಮತ್ತು ಪೂಜಾ ಕೈಂಕರ್ಯಗಳನ್ನು ನಡೆಸಲು ಜಲ ಸಂಪನ್ಮೂಲ ಇಲಾಖೆ ಜೊತೆಗೆ ಪ್ರವಾಸೋದ್ಯಮ, ಮುಜರಾಯಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳು ತಮ್ಮ ವ್ಯಾಪ್ತಿಗೆ ಒಳಪಟ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿವೆ.

ದಕ್ಷಿಣ ಭಾರತ ಪ್ರವಾಸೋದ್ಯಮ
ಎಲ್ಲಾ ಆರ್ಥಿಕ ಹೊರೆ ಜಲ ಸಂಪನ್ಮೂಲ ಇಲಾಖೆ ಮೇಲೆ ಬೀಳುವುದಿಲ್ಲ, ಕಾವೇರಿ ಆರತಿ ಕಾರ್ಯಕ್ರಮವನ್ನು ದಕ್ಷಿಣ ಭಾರತದ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗುವುದು.
ಈ ಉದ್ದೇಶಕ್ಕಾಗಿ ಕೆಆರ್‌ಎಸ್ ಅಣೆಕಟ್ಟೆಗೆ ಹೊಂದಿಕೊಂಡಿರುವ ನಾಲ್ಕು ಪಂಚಾಯತ್‌ಗಳನ್ನು ಸೇರಿಸಿ ಯೋಜನಾ ಪ್ರಾಧಿಕಾರ ಸ್ಥಾಪಿಸಲಾಗುವುದು.
ಇದಕ್ಕಾಗಿ ಯಾವುದೇ ಭೂಸ್ವಾಧೀನ ಮಾಡುವುದಿಲ್ಲ, ಪ್ರವಾಸಿಗರ ಅನುಕೂಲಕ್ಕಾಗಿ ವಸತಿ, ಹೋಟೆಲ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಲು ಸ್ಥಳೀಯ ಭೂಮಾಲೀಕರಿಗೆ ಅವಕಾಶ ನೀಡಲಾಗುವುದು.
ಪ್ರವಾಸಿಗರಿಗೆ ಸೌಲಭ್ಯ
ಅವರು, ಯೋಜನಾ ಪ್ರಾಧಿಕಾರದ ಅನುಮತಿ ಪಡೆದು ಪ್ರವಾಸಿಗರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ರೂಪಿಸಬಹುದಾಗಿದೆ ಎಂದರು.
ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕೆಳಭಾಗದ ದೂರ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ, ಇದಕ್ಕಾಗಿ ಪ್ರತ್ಯೇಕ ವೇದಿಕೆಗಳನ್ನು ಸಿದ್ಧಪಡಿಸಲಾಗುವುದು.
ಒಮ್ಮೆಗೆ 10,000 ಮಂದಿ ಕಾವೇರಿ ಆರತಿ ವೀಕ್ಷಣೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು, ಕಾರ್ಯಕ್ರಮ ವೀಕ್ಷಣೆಗೆ ಕೆಲವೆಡೆ ಉಚಿತ ಅವಕಾಶ ಇದ್ದರೆ, ಮತ್ತೆ ಕೆಲವೆಡೆ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ ಎಂದರು.
ನಾಲ್ಕು ಮಾರ್ಗಗಳ ವಿಸ್ತರಣೆ
ಕೆಆರ್‌ಎಸ್‌ನ ನಾಲ್ಕು ಮಾರ್ಗಗಳನ್ನು ವಿಸ್ತರಿಸಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ.
ದಸರಾ ಆಚರಣೆಗೆ ಇನ್ನೂ ಆರು ತಿಂಗಳ ಸಮಯವಿದ್ದು, ಅಷ್ಟರಲ್ಲಿ ಕಾವೇರಿ ಆರತಿ ಕಾರ್ಯಕ್ರಮಗಳ ಪೂರ್ಣ ಸಿದ್ಧತೆ ನಡೆಯಲಿದೆ ಎಂದರು.
