ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಚರ್ಚೆ
ಬೆಂಗಳೂರು: ಕೇಂದ್ರ ಸರ್ಕಾರ ಜಾತಿಗಣತಿ ನಡೆಸುವುದಾಗಿ ಪ್ರಕಟ ಮಾಡಿದ ನಂತರವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವೂ ಸಲ್ಲಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
ಮೇ 9ರಂದು ನಡೆಯುವ ಮಂತ್ರಿ ಮಂಡಲ ಸಭೆಯಲ್ಲಿ ವರದಿಯ ಶಿಫಾರಸ್ಸುಗಳ ಬಗ್ಗೆ ಚರ್ಚೆ ಮಾಡಲು ಮಂಡನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬಹಳ ಹಿಂದೆ ವರದಿಯನ್ನು ಸಿದ್ದಪಡಿಸಿದೆ. ಕೇಂದ್ರ ಸರ್ಕಾರ ಈಗಷ್ಟೇ ಪ್ರಕಟ ಮಾಡಿದೆ ಜಾತಿ ಗಣತಿ ನಡೆಸಿ ವರದಿ ಬರಲು ಬಹಳ ಸಮಯವಿಡಿಯುತ್ತದೆ.
ನಮ್ಮ ವರದಿಯನ್ನು ಅನುಷ್ಟಾನಕ್ಕೆ ತರೋಣ. ತರುವುದಕ್ಕೂ ಮುನ್ನ ಸಾರ್ವಜನಿಕರ ಚರ್ಚೆಗೆ ಬಿಡೋಣ. ಅವರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳೋಣ ಎಂಬ ನಿಲುವಿಗೆ ಮುಖ್ಯಮಂತ್ರಿ ಅವರು ಅಂಟಿಕೊಂಡಿದ್ದಾರೆ.
ಮುಖ್ಯಮಂತ್ರಿ ನಿಲುವಿಗೆ ನಾಲ್ಕೈದು ಸಚಿವರು ಬೆನ್ನಿಗೆ ನಿಂತಿದ್ದಾರೆ. ಆದರೆ ಒಕ್ಕಲಿಗ ಮತ್ತು ಲಿಂಗಾಯಿತ ಸಚಿವರು ಏಕಾಏಕಿಯಾಗಿ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಜಾತಿಗಣತಿ ನಡೆಸುವುದಾಗಿ ಪ್ರಕಟ ಮಾಡುವುದರಿಂದ ನಮ್ಮ ವರದಿ ಅನುಷ್ಠಾನದಿಂದ ಪ್ರಯೋಜವಿಲ್ಲ. ಸ್ವಲ್ಪ ದಿನ ಕಾದು ನೋಡೋಣ ಎಂಬ ನಿಲುವಿಗೆ ಈ ಸಮಾಜದ ಸಚಿವರುಗಳು ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.
ವರದಿಯ ಅಂಕಿ-ಅಂಶಗಳ ಬಗ್ಗೆ ಬಿನ್ನಾಭಿಪ್ರಾಯಗಳಿವೆ. ಅದನ್ನು ಸರಿಪಡಿಸಿ ನಂತರ ತೀರ್ಮಾನ ಕೈಗೊಳ್ಳೊಣ, ಈಗ ದುಡುಕುವುದು ಬೇಡ. ಮುಂದೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗಲಿವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಅನುಷ್ಠಾನದ ತರಾತುರಿ ಬೇಡ. ಈಗಾಗಲೇ ಕೆಲವು ಸಮಾಜಗಳು ವರದಿಯ ಅಂಕಿ-ಅಂಶಗಳನ್ನು ವಿರೋಧಿಸಿವೆ. ಆ ಸಮಾಜಗಳನ್ನು ವಿರೋಧ ಮಾಡಿಕೊಂಡು ನಾವು ಅನುಷ್ಠಾನಗೊಳಿಸುವುದರಿಂದ ಪ್ರಯೋಜನವೇನು ಎಂಬುದನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಲು ಮುಂದಾಗಿದ್ದಾರೆ.
ಸಂಪುಟದಲ್ಲಿ ವಿರೋಧ ವ್ಯಕ್ತವಾಗುತ್ತದೆ ಎಂಬುದನ್ನು ಅರಿತಿದ್ದರೂ ಮುಖ್ಯಮಂತ್ರಿ ಅವರು ನಾಳಿನ ಸಂಪುಟ ಸಭೆಯಲ್ಲಿ ಮುಖ್ಯ ವಿಷಯವಾಗಿ ತೆಗೆದುಕೊಂಡಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ 2024ರಲ್ಲಿ ನೀಡಿದ ವರದಿಯನ್ನು ಬೆಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿತ್ತು.
ಅಂದಿನ ಸಭೆಯಲ್ಲಿ ಬಹುತೇಕ ಸಚಿವರು ವರದಿಯ ಅಂಕಿ-ಅಂಶಗಳ ಬಗ್ಗೆ ಅಪಸ್ವರ ಎತ್ತಿದ್ದರಿಂದ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿರಲಿಲ್ಲ. ನಿಮ್ಮ ಅಭಿಪ್ರಾಯಗಳನ್ನು ಟಿಪ್ಪಣಿ ಮಾಡಿ ಮಂಡಿಸಿ ಎಂದು ಅಂದು ಮುಖ್ಯಮಂತ್ರಿ ಅವರು ಎಲ್ಲಾ ಸಚಿವರಿಗೂ ಸೂಚಿಸಿದ್ದರು.
ಮುಖ್ಯಮಂತ್ರಿ ಅವರ ಸೂಚನೆಯಂತೆ ಸಚಿವರುಗಳು ವರದಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಸಿದ್ದಪಡಿಸಿಕೊಂಡಿದ್ದು, ನಾಳೆ ಮಂತ್ರಿ ಮಂಡಲದಲ್ಲಿ ಮಂಡಿಸಲಿದ್ದಾರೆ. ವರದಿಗೆ ಅನುಷ್ಠಾನಕ್ಕೆ ಒಮ್ಮತದ ಅಭಿಪ್ರಾಯ ಮೂಡಿಬರುವ ಲಕ್ಷಣಗಳು ಕಂಡುಬಂದಿಲ್ಲ. ಆದರೆ ಮುಖ್ಯಮಂತ್ರಿ ಅವರು ವರದಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿ ಸರ್ಕಾರಿ ದಾಖಲೆಗಳಲ್ಲೂ ದಾಖಲಿಸಲು ಹೊರಟಿದ್ದಾರೆ.
ಆದರೆ ಸಂಪುಟ ಸಭೆಯಲ್ಲಿ ಯಾವ ತೀರ್ಮಾನ ಹೊರ ಬರುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
