ಬೆಂಗಳೂರು:ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೃಢ ಹೆಜ್ಜೆಗಳನ್ನು ಇಟ್ಟಿದ್ದು, ಭಾರತದ ಮೇಲೆ ದಾಳಿ ನಡೆಸಿದ ರಾಷ್ಟ್ರಕ್ಕೆ ನಮ್ಮ ಸೇನಾಪಡೆಗಳು ತಕ್ಕ ಪಾಠ ಕಲಿಸಿವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಪ್ರವಾಸಿಗರ ಮೇಲೆ ಎಸಗಿದ ಪೈಶಾಚಿಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ಆ ದೇಶದ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡುವ ಮೂಲಕ ಪ್ರಬಲ ತಿರುಗೇಟು ನೀಡಿದೆ ಎಂದರು.
ಪಾಕಿಸ್ತಾನಕ್ಕೆ ನಡುಕ
ನಮ್ಮ ಹೆಮ್ಮೆಯ ಸೇನಾಪಡೆಗಳ ಶಕ್ತಿಯ ಮುಂದೆ ಪಾಕಿಸ್ತಾನ ಮಂಡಿಯೂರಿದೆ, ಭಾರತದ ಮೇಲುಗೈ ಸಾಧಿಸಿದೆ, ಪಾಕಿಸ್ತಾನಕ್ಕೆ ನಡುಕ ಉಂಟಾಗಿದೆ.
ಉಗ್ರರ ಚಟುವಟಿಕೆಗಳಿಗೆ ಇತಿಶ್ರೀ ಹಾಡಲು ಪಾಕಿಸ್ತಾನದಲ್ಲಿನ ಅವರ ಶಿಬಿರಗಳ ಮೇಲೆ ನಮ್ಮ ಸೈನಿಕರು ದಾಳಿ ಮಾಡಿದರು.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಎಂಬುದು ಸರಿಯಲ್ಲ, ಜಾಗತಿಕ ಮಟ್ಟದಲ್ಲಿ ಮುಖ ಉಳಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ, ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಭಾರತ ಒಪ್ಪಿಲ್ಲ, ಅವಕಾಶವನ್ನೂ ಕೊಟ್ಟಿಲ್ಲ, ಪ್ರಧಾನಿಮಂತ್ರಿ ಸಹಾ ಇದೇ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ, ರಾಷ್ಟ್ರದ ಹಿತಾಸಕ್ತಿ ವಿಷಯದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.
ಉಗ್ರರ ಪೋಷಕ
ಉಗ್ರರ ಪೋಷಕ ಪಾಕಿಸ್ತಾನವನ್ನು ಮಟ್ಟ ಹಾಕುವ ದೃಷ್ಟಿಯಿಂದ ಪೂರ್ಣ ಪ್ರಮಾಣದ ಯುದ್ಧ ಆಗಲೇಬೇಕಿತ್ತು ಎಂಬ ನಿಲುವು ಒಂದು ಕಡೆ ಇದ್ದರೆ, ಮತ್ತೊಂದು ಕಡೆ ರಷ್ಯಾ, ಉಕ್ರೇನ್ ಯುದ್ಧದಿಂದ ಇಂದು ಯಾವ ಸ್ಥಿತಿ ಉಂಟಾಗಿದೆ ಎನ್ನುವ ವಾದವೂ ಇದೆ.
ಈ ದೃಷ್ಟಿಯಿಂದ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ, ಈಗಲಾದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಪೂರ್ಣ ನಾಶವಾಗಲಿದೆ ಎಂದರು.
ದಾಳಿಗೆ ಪ್ರತ್ಯುತ್ತರ
ಪ್ರಧಾನಿ ನರೇಂದ್ರ ಮೋದಿ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು, ಪಹಲ್ಗಾಮ್ ದಾಳಿಗೆ ಯಾವ ರೀತಿ ಪ್ರತ್ಯುತ್ತರ ನೀಡಲಾಯಿತು ಎಂಬುದನ್ನು ಇಡೀ ದೇಶ ನೋಡಿದೆ.
ದೇಶದ ಪ್ರತಿಷ್ಠೆಗೆ ಧಕ್ಕೆ ಬಾರದಂತೆ ಪ್ರಧಾನಮಂತ್ರಿ ಹಾಗೂ ಸೇನಾಪಡೆಗಳು ಕೈಗೊಂಡ ನಿರ್ಧಾರಗಳನ್ನೂ ನೋಡಿದ್ದೇವೆ, ಉಗ್ರರಿಗೆ ಶಿಕ್ಷೆ ಕೊಡಬೇಕು, ನಮ್ಮ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ, ಕೇವಲ ಎರಡೇ ದಿನದಲ್ಲಿ ಪಾಕಿಸ್ತಾನ ಶರಣಾಗುವಂತೆ ಸೇನಾಪಡೆಗಳು ಪರಾಕ್ರಮ ಮೆರೆದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
