ತಜ್ಞ ವೈದ್ಯರು, ವೈದ್ಯರು, ಸ್ಟಾಫ್ ನರ್ಸ್ ಗಳ ವೇತನ ಪರಿಷ್ಕರಣೆ
ಬೆಂಗಳೂರು: ಸರ್ಕಾರವೇ ಇನ್ನು ಮುಂದೆ 108 ಆಂಬುಲೆನ್ಸ್ ಸೇವೆ ಒದಗಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಪ್ರಕಟಿಸಿದ್ದಾರೆ.
ತಜ್ಞ ವೈದ್ಯರು, ವೈದ್ಯರು ಹಾಗೂ ಸ್ಟಾಫ್ ನರ್ಸ್ಗಳ ವೇತನವನ್ನು ಪರಿಷ್ಕರಣೆ ಮಾಡುವುದಾಗಿಯೂ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಏಜೆನ್ಸಿ ಮೂಲಕ ಕಾರ್ಯ ನಿರ್ವಹಿಸುತ್ತಿದ್ದ 108 ಸೇವೆಯನ್ನು ಹಿಂದಕ್ಕೆ ಪಡೆದು ಇಲಾಖೆಯೇ ನಡೆಸಲಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಸೇವೆಯನ್ನು ಇಲಾಖೆ ಅಡಿಯಲ್ಲಿ ನಡೆಸಿ ಯಶಸ್ವಿಯಾಗಿದ್ದು, ಅದನ್ನು ರಾಜ್ಯಾದ್ಯಂತ ಇನ್ನು ಮೂರು ತಿಂಗಳಲ್ಲಿ ವಿಸ್ತರಿಸುವುದಾಗಿಯೂ ತಿಳಿಸಿದರು.
108 ಸಂಪೂರ್ಣ ಸೇವೆ ಹಾಗೂ ನಿರ್ವಹಣೆ ಸರ್ಕಾರವೇ ಮಾಡಲಿದೆ ಎಂದರು. ಇದರ ನಿರ್ವಹಣೆಯನ್ನು ಇದುವರೆವಿಗೂ ಏಜೆನ್ಸಿಗಳಿಗೆ ವಹಿಸಿಕೊಡಲಾಗಿತ್ತು. ಗುತ್ತಿಗೆ ಪಡೆದ ಸಂಸ್ಥೆಯ ಮೇಲೆ ಆರೋಪಗಳು ಬಂದ ಹಿನ್ನೆಯಲ್ಲಿ ಸರ್ಕಾರ ಇಂಥಹ ತೀರ್ಮಾನ ಕೈಗೊಂಡಿದೆ.
ರಾಷ್ಟ್ರೀಯ ಆರೋಗ್ಯ ಮಿಷಿನ್ ಯೋಜನೆ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯದರು, ಎಸ್.ಎನ್.ಸಿ.ಯು ಮತ್ತು ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾಫ್ ನರ್ಸ್ಗಳ ವೇತನ ಪರಿಷ್ಕರಿಸಿ ಹೆಚ್ಚಳ ಮಾಡಲಾಗಿದೆ.
ಇದರಿಂದ ವೈದ್ಯರ ವೇತರ 50 ರಿಂದ 60 ಸಾವಿರಕ್ಕೂ ತಜ್ಞ ವೈದ್ಯರಿಗೆ ಒಂದು ಲಕ್ಷದ ಹತ್ತು ಸಾವಿರರಿಂದ ಒಂದು ಲಕ್ಷದ ನಲವತ್ತು ಸಾವಿರದವರೆಗೆ ಹೆಚ್ಚಳ ಮಾಡಲಾಗಿದೆ.
ಸ್ಟಾಫ್ ನರ್ಸ್ಗಳ ವೇತನವನ್ನು 18 ಸಾವಿರದಿಂದ 22 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು. ಈ ವೇತನವು ಹೊಸದಾಗಿ ನೇಮಕ ಮಾಡಿಕೊಳ್ಳುವ ಸಿಬ್ಬಂದಿಗೆ ದೊರೆಯಲಿದೆ.
ಹೊಸ ವೇತನ ಪಡೆಯಬೇಕೆಂದರೆ ಹಳಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೆ ಹೊಸದಾಗಿ ಸೇವೆಗೆ ಮರು ಸೇರ್ಪಡೆಗೊಂಡರೆ ಪರಿಷ್ಕರಣೆ ವೇತನ ದೊರೆಯಲಿದೆ ಎಂದರು.
