ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷಗಳು ತುಂಬುತ್ತಿದ್ದಂತೆ ನಾಯಕತ್ವ ಬದಲಾವಣೆ ಕೂಗು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಹೊಗೆ ಆಡಲು ಆರಂಭಿಸಿದೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶತಾಯ-ಗತಾಯ ಮುಖ್ಯಮಂತ್ರಿ ಗಾದಿ ಪಡೆಯಲೇಬೇಕೆಂದು ಪಣ ತೊಟ್ಟಿದ್ದಾರೆ.
ಅಧಿನಾಯಕರಿಗೆ ಬೇಡಿಕೆ
ಮುಖ್ಯಮಂತ್ರಿ ಸ್ಥಾನ ತಮಗೆ ದೊರಕಿಸಿಕೊಡುವಂತೆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮುಂದೆ ತಮ್ಮ ಬೇಡಿಕೆಯನ್ನು ಈಗಾಗಲೇ ಇಟ್ಟಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಸಂದರ್ಭದಲ್ಲಿ ತಮಗೆ ನೀಡಿರುವ ಭರವಸೆಯಂತೆ ಮುಖ್ಯಮಂತ್ರಿ ಗಾದಿ ಕೊಡಿಸಿ, ನಿಮ್ಮನ್ನು ಬಿಟ್ಟು ಇನ್ಯಾರ ಬಳಿಯೂ ನಾನು ಕೇಳುತ್ತಿಲ್ಲ.
ಕೆಲವರು ನನಗೆ ಶಾಸಕರ ಬೆಂಬಲವಿಲ್ಲ ಎಂಬುದಾಗಿ ನಿಮ್ಮ ಬಳಿ ಹೇಳಿಕೊಂಡಿದ್ದಾರೆ, ನನಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ 86 ಶಾಸಕರ ಬೆಂಬಲವಿದೆ ಎಂದು ಶಾಸಕರ ಹೆಸರು, ಕ್ಷೇತ್ರ ಮತ್ತು ಜಿಲ್ಲೆಯ ಮಾಹಿತಿಯನ್ನೂ ಖರ್ಗೆ ಹಾಗೂ ವೇಣುಗೋಪಾಲ್ ಅವರುಗಳಿಗೆ ನೀಡಿದ್ದಾರೆ.
ಪಕ್ಷ ಅಧಿಕಾರಕ್ಕೆ
ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನನ್ನ ಪಾತ್ರವೂ ದೊಡ್ಡದಿದೆ ಎಂಬುದು ನಿಮಗೂ ತಿಳಿದಿದೆ, ಕಳೆದ 14-15 ವರ್ಷಗಳಿಂದ ಒಬ್ಬರಿಗೇ ಪ್ರತಿಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೀರಿ.
ಈಗ ಮತ್ತೊಮ್ಮೆ ನನಗೆ ಅವಕಾಶ ತಪ್ಪಿದರೆ, ಮುಖ್ಯಮಂತ್ರಿ ಸ್ಥಾನ ದೊರೆಯುವುದು ಕಷ್ಟ ಎಂಬುದನ್ನು ನಾನು ಬಲ್ಲೆ, ಆದ್ದರಿಂದ ಪ್ರಸಕ್ತ ಅವಧಿಯಲ್ಲೇ ನನಗೆ ನೀವು ಮುಖ್ಯಮಂತ್ರಿ ಗಾದಿ ನೀಡಬೇಕು, ಮಾತಿಗೆ ತಪ್ಪಿದರೆ ನನ್ನ ರಾಜಕೀಯ ದಾಳವನ್ನು ನಾನು ಉರುಳಿಸಬೇಕಾಗುತ್ತದೆ ಎಂಬ ಸಂದೇಶ ತಲುಪಿಸಿದ್ದಾರೆ.
ಈ ಸಂದೇಶದ ಬೆನ್ನಲ್ಲೇ ಶಿವಕುಮಾರ್ ಅವರು, ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವ ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರನ್ನೂ ಸಾರ್ವಜನಿಕ ಕಾರ್ಯಕ್ರಮ ಹಾಗೂ ರಾಜ್ಯ ಸರ್ಕಾರಿ ಕೆಲಸದ ಹೆಸರಿನಲ್ಲಿ ಭೇಟಿ ಮಾಡಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳ ನೆಪ
ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಾಜನಾಥ್ ಸಿಂಗ್ ಅವರೊಂದಿಗೆ ಪ್ರತ್ಯೇಕವಾಗಿ ಧಾರ್ಮಿಕ ಕಾರ್ಯಕ್ರಮಗಳ ನೆಪದಲ್ಲಿ ಶಿವಕುಮಾರ್ ಒಬ್ಬರೇ ವೇದಿಕೆ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ದೆಹಲಿ ಭೇಟಿ ವೇಳೆ ಸರ್ಕಾರಿ ಕಾರ್ಯಕ್ರಮ ನೆಪದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಭೇಟಿ ನಂತರ ರಾಜನಾಥ್ ಸಿಂಗ್ ಅವರನ್ನು ಶಿವಕುಮಾರ್ ಮುಖಾಮುಖಿ ಭೇಟಿ ಮಾಡುವ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ.
ಪ್ರಧಾನಿಗೆ ತುಂಬಾ ಆಪ್ತರು
ಬಿಜೆಪಿಯಲ್ಲಿ ಕೆಲವು ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಭೂಪೇಂದ್ರ ಯಾದವ್ ಪಾತ್ರ ದೊಡ್ಡದಿರುತ್ತದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಇವರು ತುಂಬಾ ಆಪ್ತರು ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಅದೇ ರೀತಿ ಗಡ್ಕರಿ ಹಾಗೂ ರಾಜನಾಥ್ ಸಿಂಗ್ ಬಿಜೆಪಿ ಮತ್ತು ಸರ್ಕಾರದಲ್ಲಿ ರಾಜಕೀಯ ನಿರ್ಧಾರಗಳ ವೇಳೆ ಪ್ರಮುಖ ಪಾತ್ರ ವಹಿಸುತ್ತಾರೆ.
ಇವರುಗಳನ್ನೇ ಭೇಟಿ ಮಾಡಿ ಮಾತನಾಡುವ ಮೂಲಕ ಶಿವಕುಮಾರ್, ತಮಗೆ ಮುಖ್ಯಮಂತ್ರಿ ಗಾದಿ ನೀಡದಿದ್ದರೆ, ಯಾವುದೇ ನಿರ್ಧಾರಗಳಿಗೂ ಸಿದ್ಧ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ.
