ಹಿಂದುಳಿದ ವರ್ಗಗಳ ಆಯೋಗದ ವರದಿ ತಿರಸ್ಕರಿಸಲು ವೀರಶೈವ ಸಮುದಾಯದ ಸಚಿವರ ಆಗ್ರಹ
ಬೆಂಗಳೂರು : ಸಾಮಾಜಿಕ, ಆರ್ಥಿಕ ಸಮೀಕ್ಷೆ ಕುರಿತ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ತಿರಸ್ಕರಿಸಿ ಮರುಸಮೀಕ್ಷೆ ನಡೆಸುವಂತೆ ವೀರಶೈವ ಸಮುದಾಯಕ್ಕೆ ಸೇರಿದ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವೀರಶೈವ ಸಮಾಜಕ್ಕೆ ಸೇರಿದ ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ, ಈಶ್ವರ್ ಬಿ. ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ್, ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಮ್ಮತದಿಂದ ಹೊಸದಾಗಿ ಸಮೀಕ್ಷೆ ನಡೆಸುವಂತೆ ಕೋರಿದ್ದಾರೆ.
ಸಪ್ತ ಸಚಿವರುಗಳು ಪ್ರತ್ಯೇಕವಾಗಿ ಮುಖ್ಯಮಂತ್ರಿ ಅವರಿಗೆ ಲಿಖಿತ ಪತ್ರ ನೀಡಿದ್ದರೂ, ಎಲ್ಲಾ ಸಚಿವರುಗಳ ಅಭಿಪ್ರಾಯ ಮತ್ತು ನಿರ್ಣಯ ಒಂದೇ ಆಗಿದೆ. ವೀರಶೈವ/ಲಿಂಗಾಯತ ಸಮುದಾಯದ ಜನಸಂಖ್ಯೆ ವರದಿಯಲ್ಲಿ ಶೇ. 11 ಕ್ಕೆ ಇಳಿದಿದೆ, ಈ ಅಂಕಿ-ಅಂಶಗಳ ಬಗ್ಗೆ ಸಂಶಯವಿದೆ.
ಜನಸಂಖ್ಯೆ ಇಳಿಕೆ ಆಗಲು ಹೇಗೆ ಸಾಧ್ಯ? ಹಿಂದಿನ ವರದಿ ಹಾಗೂ ಜನಸಂಖ್ಯಾ ಅಂಕಿ-ಅಂಶಗಳ ಪ್ರಕಾರ ಅಜಗಜಾಂತರ ವ್ಯತ್ಯಾಸವಿದೆ. ಕಳೆದ 10 ವರ್ಷಗಳ ಹಿಂದಿನ ಸಮೀಕ್ಷೆ ನಂತರ ಕೋವಿಡ್-19 ಮಹಾಮಾರಿ ರಾಜ್ಯದಲ್ಲಿ ಸಹಸ್ರಾರು ಜನರ ಬಲಿ ಪಡೆದಿದೆ.
ಈ ಹಿನ್ನೆಲೆಯಲ್ಲಿ ಅಂಕಿ-ಅಂಶಗಳೇ ಬದಲಾಗುತ್ತವೆ. ಇದಕ್ಕೂ ಹೊಸ ಮಾನದಂಡ ಬೇಕಲ್ಲವೆ? ಒಟ್ಟಾರೆ ವರದಿಯಲ್ಲಿನ ಅಂಕಿ-ಅಂಶಗಳ ಬಗ್ಗೆ ನಮ್ಮ ಸಮುದಾಯ ಆಕ್ಷೇಪಿಸಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸಿದೆ. ಆದ್ದರಿಂದ ಸಮುದಾಯದ ಅಭಿಪ್ರಾಯ ಮತ್ತು ವಾಸ್ತವ ಅಂಕಿ-ಅಂಶಗಳನ್ನು ನೀಡಿದ್ದೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಜನಗಣತಿ ಸಮೀಕ್ಷೆ ಮಾಡುವ ಘೋಷಣೆ ಮಾಡಿದೆ. ಅದರ ಅಂಕಿಅಂಶಗಳನ್ನು ಹೊಂದಾಣಿಕೆ ಮಾಡಿ. ಇದರಿಂದ ಜನರಿಗೆ ವಿಶ್ವಾಸ ಬರಲಿದೆ ಮತ್ತು ಸರ್ಕಾರಕ್ಕೂ ಒಳ್ಳೆಯ ಹೆಸರು ಬರಲಿದೆ. ಅಲ್ಲಿಯವರೆಗೆ ಯಾವುದೇ ನಿರ್ಣಯ ಬೇಡ.
ವೀರಶೈವ ಸಮುದಾಯದ ಸಚಿವರ ಜೊತೆಗೆ ಬೇರೆ ಪಂಗಡಕ್ಕೆ ಸೇರಿದ ಕೆಲವು ಸಚಿವರು, ಗಣತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸದ್ಯಕ್ಕೆ ಯಾವ ನಿರ್ಣಯ ಬೇಡ ಎಂಬ ಸಲಹೆ ಮಾಡಿದರು.
ಹೀಗಾಗಿ ಯಾವುದೇ ನಿರ್ಣಯ ಕೈಗೊಳ್ಳದ ಸಂಪುಟ ಸಭೆ ಜಾತಿಗಣತಿ ವಿಚಾರವನ್ನು ಮುಂದೂಡಿದೆ. ಇದಕ್ಕೂ ಮುನ್ನ ದಲಿತ ಸಮುದಾಯಕ್ಕೆ ಸೇರಿದ ಸಚಿವರು ಕಾಂತರಾಜು ಅವರ ಸೋಷಿಯಲ್ ಸರ್ವೆ ಅನುಷ್ಠಾನ ಮಾಡಬಹುದು. ತೆಲಂಗಾಣ ಮತ್ತು ಬಿಹಾರದಲ್ಲಿ ಒಬಿಸಿ ಮೀಸಲಾತಿ ಅಳವಡಿಸಿಕೊಳ್ಳಲಾಗಿದೆ. ಯಾವುದೇ ಗೊಂದಲ ಇಲ್ಲದೇ ವರದಿ ಅನುಷ್ಠಾನಗೊಳಿಸಬಹುದು ಎಂದು ಮುಖ್ಯಮಂತ್ರಿ ಅವರ ಬೆಂಬಲಕ್ಕೆ ನಿಂತಿದ್ದರು.
ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಹಿಂದುಳಿದ ವರ್ಗಗಳ ಆಯೋಗದ ವರದಿಗೆ ಸಂಬಂಧಿಸಿದಂತೆ ಬಹುತೇಕ ಸಚಿವರು ತಮ್ಮ ಅಭಿಪ್ರಾಯ ನೀಡಿದ್ದಾರೆಂದು ಮುಖ್ಯಮಂತ್ರಿ ಅವರು ಸಭೆ ಗಮನಕ್ಕೆ ತಂದಿದ್ದಾರೆ. ವರದಿಗೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳನ್ನು ಪಡೆದು, ಅಧ್ಯಯನ ನಡೆಸಿ ಮುಂದಿನ ಇಲ್ಲವೇ ನಂತರದ ಸಭೆಗಳಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ಪಾಟೀಲ್ ತಿಳಿಸಿದರು.
