ಬೆಂಗಳೂರು:ವೈದ್ಯಕೀಯ, ಸ್ನಾತಕೋತ್ತರ ವೈದ್ಯಕೀಯ ಸೀಟ್ ಬ್ಲಾಕಿಂಗ್ ಹಾಗೂ ಕಪ್ಪು ಹಣ ಚಲಾವಣೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸಿದ್ಧಾರ್ಥ ಶಿಕ್ಷಣ ಸಮೂಹ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಎರಡನೇ ದಿನವಾದ ಗುರುವಾರವೂ ದಾಳಿ ಮುಂದುವರಿಸಿದೆ.
ತುಮಕೂರು, ನೆಲಮಂಗಲದ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆ ಅಲ್ಲದೆ, ತುಮಕೂರಿನ ವಿವಿಧೆಡೆ ಇರುವ ಶಿಕ್ಷಣ ಸಂಸ್ಥೆಗಳ ಮೇಲೂ ದೆಹಲಿ ಮತ್ತು ಚೆನ್ನೈನಿಂದ ಬಂದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಠಾತ್ ದಾಳಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಬೆನ್ನಲ್ಲೇ ಸಂಪುಟದ ಪ್ರಭಾವೀ ಸಚಿವರೊಬ್ಬರ ಒಡೆತನದ ಸಂಸ್ಥೆಗಳ ಮೇಲೆ ಹಠಾತ್ ದಾಳಿ ನಡೆದಿರುವುದು ಮುಂದಿನ ರಾಜಕೀಯ ಸಂಚಲನಕ್ಕೆ ಮುನ್ನಡಿ ಎನ್ನಲಾಗುತ್ತಿದೆ.
ಸಿದ್ಧಾರ್ಥ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಭಾರೀ ಪ್ರಮಾಣದಲ್ಲಿ ಹಣ ಕೈ ಬದಲಾವಣೆ ಆಗಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ಕಳೆದ ಏಳು ವರ್ಷಗಳ ಹಿಂದೆ ದಾಳಿ ನಡೆಸಿ ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು.
ತದನಂತರವೂ ಎರಡು-ಮೂರು ಬಾರಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಸಮೂಹ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಡಾ.ಪರಮೇಶ್ವರ್ ಅವರನ್ನು ವಿಚಾರಣೆಗೂ ಒಳಪಡಿಸಿತ್ತು.
60 ಕೋಟಿ ರೂ. ದಾನ
ಪ್ರತೀ ವರ್ಷ ವೈದ್ಯಕೀಯ ಸೀಟುಗಳ ಪ್ರವೇಶ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಿದ್ಧಾರ್ಥ ಸಂಸ್ಥೆ 50 ರಿಂದ 60 ಕೋಟಿ ರೂ. ದಾನದ ರೂಪದಲ್ಲಿ ನೀಡುತ್ತಿತ್ತು.
ಒಟ್ಟಾರೆ 500 ಕೋಟಿ ರೂ.ಗಳನ್ನು ಸಿದ್ಧಾರ್ಥ ಶಿಕ್ಷಣ ಸಂಸ್ಥೆ ವಿವಿಧ ಸಂಘಗಳಿಗೆ ನೀಡಿದೆ, ಈ ವಹಿವಾಟಿಗೆ ತಕರಾರು ಎತ್ತಿದ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಿತ್ತು.
ಇ.ಡಿ. ಸಹಾ ತನಿಖೆ ನಡೆಸಿ, ಕೋಟಿ ಕೋಟಿ ರೂ. ವರ್ಗಾವಣೆ ಆಗಿರುವ ಬಗ್ಗೆ ದಾಖಲೆ ಸಂಗ್ರಹಿಸಿದೆ, ಇದೀಗ ಹಣದ ಮೂಲ ಹುಡುಕುತ್ತಿರುವ ಇ.ಡಿ. ಪ್ರತೀ ವರ್ಷ ವೈದ್ಯಕೀಯ ಸೀಟುಗಳ ಪ್ರವೇಶದಿಂದ ಎಷ್ಟು ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯ ತಪಾಸಣೆ ನಡೆಸಿದೆ.

2019ರಲ್ಲಿ ಐ.ಟಿ. ದಾಳಿ
ಕಳೆದ 2019ರಲ್ಲಿ ಆದಾಯ ತೆರಿಗೆ (ಐ.ಟಿ.) ದಾಳಿ ಸಂದರ್ಭದಲ್ಲಿ ಡಾ.ಪರಮೇಶ್ವರ್ ಆಪ್ತ ಸಹಾಯಕರ ಕಚೇರಿ, ಮನೆಗಳ ಮೇಲೂ ದಾಳಿ ನಡೆಸಿ ವಿಚಾರಣೆ ಮಾಡಿತ್ತು.
ಐ.ಟಿ. ತನಿಖೆಗೆ ಹೆದರಿ ಡಾ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ತಮ್ಮ ನಿವಾಸಕ್ಕೆ ಹತ್ತಿರದಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಸಂಶಯಗಳು ಎದುರಾಗಿದ್ದವು, ರಮೇಶ್ ಆತ್ಮಹತ್ಯೆ ನಂತರ ಐ.ಟಿ. ತನಿಖೆ ಮುಂದುವರಿಸಲು ಹೆದರಿ ಸ್ಥಗಿತಗೊಳಿಸಿತ್ತು.
ಸಿದ್ದಾರ್ಥ ಆತ್ಮಹ್ಯತ್ಯೆ
ಇದಕ್ಕೂ ಮುನ್ನ ಕಾಫಿ-ಡೇ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರು ಆತ್ಮಹ್ಯತ್ಯೆಗೆ ಶರಣಾಗಿದ್ದರು.
ಸಿದ್ದಾರ್ಥ ಅವರ ಆತ್ಮಹತ್ಯೆಗೂ ಮುನ್ನ, ಚಲಾವಣೆಯಿಂದ ಸ್ಥಗಿತಗೊಂಡಿದ್ದ 2000 ರೂ. ಮೌಲ್ಯದ ನೋಟುಗಳ ಬದಲಾವಣೆ ಆರೋಪದ ಮೇಲೆ ಐ.ಟಿ. ಮತ್ತು ಇ.ಡಿ. ದಾಳಿ ಮಾಡಿದ್ದನ್ನು ಸ್ಮರಿಸಬಹುದು.
ದಾಳಿ ನಂತರ ಇಬ್ಬರು ವ್ಯಕ್ತಿಗಳ ಆತ್ಮಹತ್ಯೆ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು, ಇದರಿಂದ ಸಿದ್ದಾರ್ಥ ಮೇಲಿನ ತನಿಖೆಯನ್ನು ಐ.ಟಿ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಇ.ಡಿ. ದಾಳಿಗೆ ಪ್ರತಿಕ್ರಿಯಿಸಿರುವ ಡಾ.ಪರಮೇಶ್ವರ್, ಕಾನೂನಿಗಿಂತ ಯಾರೂ ಮೇಲಲ್ಲ, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೇಳಿದ ಲೆಕ್ಕ ವಿವರಗಳನ್ನು ನೀಡುವಂತೆ ಸಂಸ್ಥೆ ಸಿಬ್ಬಂದಿಗೆ ಸೂಚಿಸಿದ್ದು, ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
