ಬೆಂಗಳೂರು:ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆಎಸ್‌ಡಿಎಲ್) ಸಂಸ್ಥೆ ವಹಿವಾಟನ್ನು ಮುಂದಿನ 3 ವರ್ಷಗಳಲ್ಲಿ 5,000 ಕೋಟಿ ರೂ.ಗೆ ಕೊಂಡೊಯ್ಯುವ ಕಾರ್ಯತಂತ್ರದ ಭಾಗವಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ (ಪ್ರಚಾರ ರಾಯಭಾರಿ) ಆಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಪಾರದ ಪ್ರಶ್ನೆ ಬಂದಾಗ ಸ್ಪರ್ಧಾತ್ಮಕತೆ ನೋಡಬೇಕು ಹಾಗೂ ಅದಕ್ಕೆ ತಕ್ಕ ಕಾರ್ಯತಂತ್ರ ರೂಪಿಸಬೇಕಾಗುತ್ತದೆ, ಕೆಎಸ್‌ಡಿಎಲ್ ವಹಿವಾಟು 1,700 ಕೋಟಿ ರೂ. ಮೀರಿದೆ, ಆದರೆ, ರಾಜ್ಯದಲ್ಲಿ ವಹಿವಾಟು ಮೊತ್ತ ಕೇವಲ 320 ಕೋಟಿ ರೂ. ಆಸುಪಾಸಿನಲ್ಲಿದೆ ಎಂದರು.
ನಕಾರಾತ್ಮಕವಾಗಿ ನೋಡಬಾರದು
ಪರಿಣತರ ತೀರ್ಮಾನದಂತೆ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿದ್ದು, ಕೆಲವರು ಕನ್ನಡದ ನಟ-ನಟಿಯರು ಇರಲಿಲ್ಲವೇ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಈ ವಿಷಯವನ್ನು ನಕಾರಾತ್ಮಕವಾಗಿ ನೋಡಬಾರದು.
ತಮನ್ನಾ ನೇಮಕಕ್ಕೂ ಮುನ್ನ ಕನ್ನಡದವರಾದ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಶ್ರೀಲೀಲಾ, ಪೂಜಾ ಹೆಗಡೆ, ಕಿಯಾರ ಅಡ್ವಾಣಿ ಅವರನ್ನೂ ಸಂಪರ್ಕಿಸಲಾಗಿತ್ತು.
ದೀಪಿಕಾ ತಮ್ಮದೇ ಉತ್ಪನ್ನಗಳ ಪ್ರಚಾರದಲ್ಲಿ ತೊಡಗಿದ್ದು, ಉಳಿದವರು ಬೇರೆ ಬೇರೆ ಸೌಂದರ್ಯವರ್ಧಕ, ಕ್ರೀಮ್ ಮತ್ತು ಸಾಬೂನುಗಳಿಗೆ ರೂಪದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
28 ಮಿಲಿಯನ್ ಫಾಲೋಯರ್ಸ್
ಮುಂದಿನ ಎರಡು ವರ್ಷ ತಮಗೆ ಬಿಡುವಿಲ್ಲ ಎಂಬುದಾಗಿ ತಿಳಿಸಿದ್ದರಿಂದ ಹಾಗೂ ತಮನ್ನಾ ಭಾಟಿಯಾ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ 28 ಮಿಲಿಯನ್ ಫಾಲೋಯರ್ಸ್ ಹೊಂದಿದ್ದು, ಅವರ ಅಖಿಲ ಭಾರತ ಮಟ್ಟದ ವರ್ಚಸ್ಸಿನ ಹಿನ್ನೆಲೆಯಲ್ಲಿ ಕೆಎಸ್‌ಡಿಎಲ್ ರೂಪದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಯಿತು.
ಕೆಎಸ್‌ಡಿಎಲ್ ಇತ್ತೀಚೆಗೆ 21 ಹೊಸ ಉತ್ಪನ್ನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಯು ಪರಿಮಳಗಳ ಕ್ಷೇತ್ರಕ್ಕೂ ಕಾಲಿಡುತ್ತಿದೆ, ಇದಕ್ಕೆಂದೇ ನಮ್ಮ ಅಧಿಕಾರಿಗಳನ್ನು ಅತ್ತರ್‌ಗೆ ಹೆಸರಾದ ಉತ್ತರಪ್ರದೇಶದ ಕನೌಜ್‌ಗೂ ಕಳುಹಿಸಿ ಅಧ್ಯಯನ ನಡೆಸಲಾಗಿದೆ.
ಹೊಸ ಯಂತ್ರೋಪಕರಣಗಳ ಖರೀದಿ ಇಲ್ಲದೆಯೇ ಕೆಎಸ್‌ಡಿಎಲ್ ಉತ್ಪಾದನೆ ಶೇಕಡ 40ರಷ್ಟು ಹೆಚ್ಚಿದೆ, ಎಫ್‌ಎಂಸಿಜಿ ವಲಯದಲ್ಲಿ ಸಂಸ್ಥೆ ಬೆಳವಣಿಗೆ ಶೇಕಡ 15ರಷ್ಟಿದೆ.
ಕೆಎಸ್‌ಡಿಎಲ್ ಮುನ್ನಡೆಯಲ್ಲಿ
ಈ ಕ್ಷೇತ್ರದಲ್ಲಿ ಗೋದ್ರೇಜ್ ಶೇ.11, ಹಿಂದೂಸ್ತಾನ್ ಲಿವರ್ಸ್ ಶೇ.9, ಐಟಿಸಿ ಶೇ.8, ವಿಪ್ರೋ ಶೇ.7 ಹೊಂದಿದ್ದು ಕೆಎಸ್‌ಡಿಎಲ್ ಇವುಗಳನ್ನು ಹಿಂದಿಕ್ಕಿದೆ.
ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆ ದೃಷ್ಟಿಯಿಂದ ಕೆಎಸ್‌ಡಿಎಲ್ ವಹಿವಾಟು 5,000 ಕೋಟಿ ರೂ.ಗೆ ತಲುಪಿಸಲು ಬಾಲಿವುಡ್ ನಟಿಯೊಬ್ಬರನ್ನೇ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳಬೇಕಾಗುತ್ತದೆ.
ಹಾಲಿವುಡ್ ನಟಿ ರಾಯಭಾರಿ
ಕೆಎಸ್‌ಡಿಎಲ್ ಸಂಸ್ಥೆ ಭಾರತವಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಬೇಕೆನ್ನುವುದು ನಮ್ಮ ಹೆಗ್ಗುರಿಯಾಗಿದೆ, ಮುಂದೊಂದು ದಿನ ಹಾಲಿವುಡ್ ನಟಿಯನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡುವ ಪರಿಸ್ಥಿತಿ ಬರಬಹುದು, ಅಂತಹ ಸ್ಥಿತಿ ಬರಲಿ ಎಂಬುದೂ ನಮ್ಮೆಲ್ಲರ ಆಶಯ.
ಕೆಎಸ್‌ಡಿಎಲ್‌ನಂತೆ ಎಂಎಸ್‌ಐಎಲ್‌ಗೂ ಹೊಸ ರೂಪ ನೀಡಲಾಗುತ್ತಿದ್ದು, ಸದ್ಯದಲ್ಲೇ ವಾರ್ಷಿಕ 10 ಸಾವಿರ ಕೋಟಿ ರೂ. ವಹಿವಾಟಿನ ಗುರಿಯುಳ್ಳ ಚಿಟ್‌ಫಂಡ್ ಆರಂಭಿಸಲು ಆಲೋಚಿಸಲಾಗಿದೆ, ಅಲ್ಲದೆ, ಹುಬ್ಬಳ್ಳಿಯ ಎನ್‌ಜಿಎಫ್ ಉಳಿಸಿಕೊಳ್ಳಬೇಕಿದೆ, ಆದ್ದರಿಂದ ಅಖಿಲ ಭಾರತ ಮೀರಿ ಜಾಗತಿಕ ಮಟ್ಟದಲ್ಲಿ ಯೋಚಿಸಬೇಕಾಗಿದೆ ಎಂದರು.
